Sunday, October 23, 2011

ಆಹಾ ನಮ್ಮ ಮದ್ವೆಯಂತೆ !!!

ಇದು ನನ್ನ ಮದ್ವೆ  ಆಹ್ವಾನ ಪತ್ರಿಕೆ ... 

For a change heege madidini ...

ಎಲ್ರೂ ಬರ್ತೀರಲ್ಲ !!!! ಸಿಗೋಣ  ಮದ್ವೇಲಿ .....

          ನಿಮ್ಮ ಶಿವೂTuesday, August 16, 2011

ನನ್ನಿಂದ ನನಗೆ ಬರ್ತ್ ಡೇ ಗ್ರೀಟಿಂಗ್ಸ್ ......!!!!!!!!!


ಸರಿಯಾಗಿ ಈ ಆಗಶ್ಟ್ 13  ಕ್ಕೆ ನನಗೆ  25  ವರ್ಷ ತುಂಬಿತು . ನನ್ನ ಆಯಸ್ಸು ಅಕಸ್ಮಾತ್ ನೂರು ವರ್ಷಗಳೆಂದು ಇಟ್ಟುಕೊಂಡರೆ ( ಭಾರತೀಯರ ಸರಾಸರಿ ಆಯಸ್ಸು 54 ಎಂಬುದು ಗೊತ್ತಿದ್ದೂ )  First Quarter of my life is over.  ಜನ್ಮ ದಿನ ಎಂಬುದು ಸಂಭ್ರಮದ ದಿನವಷ್ಟೆ ಅಲ್ಲ . ನಮ್ಮ ವಯಸ್ಸು ಹೆಚ್ಹಾದಂತೆಲ್ಲ ನಾವೇನು ಮಾಡಿದೆವು ಎಂಬುದರ ವಿಮರ್ಶೆ ಅಗತ್ಯವಲ್ಲವೆ ? .. ಕಳೆದ 25  ವರ್ಶಗಳಲ್ಲಿ ನನಗೆ ತುಂಬ ಖುಶಿ ಕೊಡುವಂತ , ತಂದೆ ತಾಯಿಗಳಿಗೆ ಗೌರವ ತರುವಂತ, ನಾಲ್ಕು ಜನ ಹೌದು ಎನ್ನುವಂತದ್ದೇನಾದರೂ ಮಾಡಿದ್ದೆನಾ ? ಎಂದು ಕೇಳಿಕೊಂಡೆ ... ಮನಸ್ಸು "  Yes, you have been able to achieve few milestones "  ಅಂತ ಸಮಾಧಾನದ ಉತ್ತರ ನೀಡಿತು .. ಆದರೆ ನನ್ನೊಳಗಿನ ಮತ್ತೊಂದು ಮನಸ್ಸು " ಯಾಕೋ ನೀನಂದುಕೊಂಡಷ್ಟು  ಪಕ್ವತೆ ನಿನಗೆ ಸಿಕ್ಕಿಲ್ಲ ಕಣೊ " ಎಂದು ಕಿಚಾಯಿಸಿಬಿಟ್ಟಿತು. ನೀನೇನು ಓದಿದೆ, ಯಾವ ಉದ್ಯೋಗ ಮಾಡುತ್ತಿದ್ದೀಯ? ಎಷ್ಟು ಸಂಪಾದನೆ ಮಾಡುತ್ತೀಯ ? ಸಾಲ ಎಷ್ಟು ಮಾಡಿದೆ ? ಮನೆ ಕಟ್ಟಿಸಿದಿಯ ? ಮದುವೆಯಾಗಲು ಇದು ಸೂಕ್ತ ಸಮಯ ಹೌದೊ ? ಮತ್ತೇಕೆ ಮದುವೆಯ ತಯಾರಿ ನಡೆಸಿದ್ದೀಯ ? ಹೀಗೆ ಎನೇನೋ ಪ್ರಶ್ನೆಗಳು ಈ ಜನುಮ ದಿನದಂದು  ಮತ್ತೆ ಮತ್ತೆ ನನ್ನ ಕಾಡಿ ಉತ್ತರ ಪಡೆದುಕೊಳ್ಳದೆ ಹಾಗೆ ಉಳಿದುಬಿಟ್ಟವು .

 ಬರ್ತ್ ಡೇ ಎಂದರೆ ಶಾಪಿಂಗ್. ಪಾರ್ಟಿ, ಹೊಸ ಬಟ್ಟೆ ಹಾಕಿ ಕೊಳ್ಳೊದು ಅಷ್ಟೆ ಅಂತ ಭಾವಿಸಿಬಿಟ್ಟಿದ್ದೆ. ಆದರೆ ಈ  25ನೇ ಬರ್ತ್ ಡೇ ಒಂದು ರೀತಿಯ ಆತ್ಮ - ವಿಮರ್ಷೆ ಗೆ ನನ್ನ ಎಡೆಮಾಡಿತು . ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ 25ವರ್ಷಗಳೆಂದರೆ ಅದು ಸಣ್ಣದಲ್ಲ. ಎನೇನೊ ಆಗಿಬಿಡಬಹುದು..ಒಂದಷ್ಟು ಹುಡುಗಾಟ, ಸ್ಕೂಲ್, ಕಾಲೇಜ್ , ಟ್ರಿಪ್, ಮಜ ಅಂದುಕೊಂಡು ಹೇಗೊ ಈ ಇಪ್ಪತ್ತೈದು ವರ್ಷಗಳು  ಕಳೆದೇಬಿಟ್ಟವು .  ಒದು ಮುಗಿಸಿದಮೇಲೆ ಒಂದು ಉದ್ಯೋಗ ಸಿಕ್ಕಿದ್ದೂ ಆಯಿತು. ಅದನ್ನು ಸೇರಿ ಮತ್ತೆ ಸರ್ಕಾರಿ ಕೆಲಸ ಸಿಕ್ತು ಅಂತ ಅದ್ನ ಬಿಟ್ಟು , ನನ್ನ ಪ್ರೀತಿಯ ಊರು ಶಿವಮೊಗ್ಗಕ್ಕೆ ವಾಪಸ್ಸಾಗಿದ್ದೂ ಆಯಿತು . ಆದರೆ ಅದ್ಯಾವ ಮಹತ್ವಾಕಾಂಕ್ಷೆಯೋ ಗೊತ್ತಿಲ್ಲ ಆ ಸರ್ಕಾರಿ ಗುಮಾಸ್ತಗಿರಿ ಕೇವಲ 3 ತಿಂಗಳಿಗೆ " ಸಾಕಪ್ಪಾ" ಅನ್ನಿಸಿಬಿಟ್ಟಿತು. ಇದೇ ನನ್ನ ಬರ್ತ್ ಡೇಯಂದೇ  ಅದನ್ನೂ ಬಿಟ್ಟು ಮತ್ತೆ ಬೆಂಗಳೂರಿನತ್ತ ಮುಖ ಮಾಡಿ ಇದೀಗ ಒಂದು ವರ್ಷ ಉರುಳೇಬಿಟ್ಟಿದೆ .  ' ಕೇಂದ್ರ ಸರ್ಕಾರಿ ನೌಕರಿ  ಸಿಗೊದೇ ಕಷ್ಟ . ಅಂತಾದ್ರಲ್ಲಿ ಅದನ್ನ ಬಿಟ್ಟು ಹೋಗೊಂತ ಮೂರ್ಖ , ಅವನಿಗೆ ಏನೊ ಹೇಳೋಕಾಗಲ್ಲ , '  ಎಂದು  "so called well wisher"  ಗಳೆಲ್ಲರೂ  ಮಾತಾಡಿಕೊಂಡದ್ದೂ ಆಯಿತು .ಆದರೆ ಅದ್ಯಾಕೋ ನನಗೆ ಮಾತ್ರ " ಅಯ್ಯೋ ಯಾಕಾದ್ರು ಬಿಟ್ ಬಂದ್ನಪ್ಪ " ಅನ್ನೋ ಭಯ , ಆತಂಕ ಕಾಡಿಲ್ಲ ..

ಹಾಗೆ ನೋಡಿದರೆ ನನಗೆ ಸ್ವಲ್ಪ ಆತಂಕ ಇರುವುದು , ಬೆಂಗಳೂರಿಗೆ ಬಂದು ನನ್ನೊಳಗಿದ್ದ ಒಬ್ಬ ಕಲಾವಿದ ಮಾತ್ರ ಎಲ್ಲಿ ಕಣ್ಮರೆಯಾಗಿಬಿಡುತ್ತಾನೋ ಎಂಬುದರ ಬಗ್ಗೆ.
ನಮ್ಮನ್ನು ಸದಾ ಜೀವಂತಿಕೆಯಿಂದಿಡಲು ಒಂದು  Profession  ಮತ್ತೊಂದು  Passion  ಇರಡೂ ಬೇಕು ತಾನೆ ? ಅದಕ್ಕಾಗಿಯೆ ಶಿವಮೊಗ್ಗಕ್ಕೆ ಹೋಗಿ ಮಿತ್ರರೊಂದಿಗೆ ಸೇರಿ ಆಗಾಗ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬರುತ್ತೇನೆ . ಅದೆನೊ ಶಿವಮೊಗ್ಗ ಎಂದರೆ ನನಗೆ ಎಲ್ಲಿಲ್ಲದ ಪ್ರೀತಿ ...

ಈ ಧೀರ್ಘ ಅವಧಿಯಲ್ಲಿ , ನನಗೆ "ಪ್ರೇಮ" ಪರಿಚಯವೂ ಆಗಿದೆ.. ಅದೆಷ್ಟೊ ವರ್ಷಗಳ ಸುಧೀರ್ಘ  ಸಲುಗೆ, ಸಂಬಂಧ ,ಸ್ನೇಹ , ಮಮತೆ ,ವಾತ್ಸಲ್ಯ , "ಪ್ರೇಮಾ" ಳ ಪ್ರೇಮವಾಗಿ ಪರಿವರ್ತನೆಯಾಯಿತು .. ಆದರೆ ಇತ್ತೀಚಿನ ದಿನಗಳಲ್ಲಿನ ಪ್ರೇಮ ಪ್ರಕರಣಗಳೆನ್ನೆಲ್ಲ ನೋಡಿ ರೋಸಿ ಹೋದ ನಾನು ಅದನ್ನು  Love  ಎಂದು ಕರೆಯಲು ಇಷ್ಟ ಪಡುವುದಿಲ್ಲ . ನಮ್ಮ ಈ ಸ್ನೇಹ ಓಂದು ಶಾಶ್ವತ  ಸಂಬಂಧವಾಗುತ್ತಿರುವುದಕ್ಕೆ , ಮತ್ತು ಅದನ್ನು ಅಷ್ಟೆ ಪ್ರೀತಿ , ಕಾಳಜಿಯಿಂದ ಒಪ್ಪಿಕೊಂಡ ನಮ್ಮಿಬ್ಬರ ಪೋಷಕರಿಗೂ ನನ್ನ ಅಭಿವಂದನೆಗಳು ... ಹಾಗೆ ನೋಡಿದರೆ ಈಗಿನ  ಕಾಲದಲ್ಲಿ  ಪ್ರೀತಿ  ಮಾಡದಿರುವವರೇ  Special   ಅನ್ನುವಷ್ಟರ  ಮಟ್ಟಿಗೆ  ಪ್ರೀತಿ              (ಅ)ಸಾಮಾನ್ಯವಾಗಿಬಿಟ್ಟಿದೆ ... ಆದರೂ ನಾವು ಇಂತವರನ್ನೆ ಪ್ರೀತಿಸಬೇಕು ಅವರೊಟ್ಟಿಗೆ ಬದುಕು ತಳ್ಳಬೇಕು ಎಂಬ concept  ಇದೆಯಲ್ಲ ಅದೇ Remarkable..
 ಈ ಬಗ್ಗೆ ಇನ್ನು ೧೦ ವರ್ಷಗಳಲ್ಲೂ ಅಷ್ಟೆ ಆಸ್ತೆ ಮತ್ತು ಶ್ರದ್ದೆ ಇರುತ್ತದೆ ಎಂಬ ನಂಬಿಕೆ ನನಗಿದೆ .. ಅದರ ಬಗ್ಗೆ ಮತ್ತೊಮ್ಮೆ ಬರೆದುಕೊಳ್ಳಬಹುದು ಆಗ ...

ಈ 25 ವರ್ಷಗಳಲ್ಲಿ ನಾನು ಕೆಲವು ತಪ್ಪು ನಿರ್ಧಾರಗಳನ್ನು ತಗೆದುಕೊಂಡಿದ್ದೇನೆ . ಹಾಗೆಯೇ ಒಳ್ಳೆಯ ನಿರ್ಧಾರಗಳನ್ನು ಕೂಡ .  Past is past.. Let me anticipate the future and live with the present happily . ನನ್ನ ಪ್ರೀತಿಯ ಕವಿ  Robert Frost  ಹೇಳುವಂತೆ  " Miles to go before I sleep ...
And there are promises to keep ...  ನನ್ನ ನಂಬಿದವರಿಗೆ ನನ್ನ  commitment  ಗಳನ್ನು ನಿಷ್ಠೆಯಿಂದ ಪೂರೈಸುತ್ತೇನೆ ...

ಜೀವನ ಎಂದರೆ ಅದು ಹೀಗೆ ಎಂದು ನಾನೆಂದು  define  ಮಾಡಿಕೊಳ್ಳುವ ಗೋಜಿಗೆ  ಹೋಗುವುದಿಲ್ಲ .. ಧುತ್ತೆಂದು ಎದುರಾಗುವ ಯಾವುದೇ ಪರಿಸ್ತಿತಿಯನ್ನೂ ಎದುರಿಸಲು ಸದಾ ತಯಾರಿರುವ ಒಂದು ಮಾನಸಿಕ ಸಾಮರ್ಥ್ಯ ನನಗೆ ಕೊಟ್ಟಿರುವ ದೇವರಿಗೆ ಮನದಲ್ಲೇ  ಥ್ಯಾಂಕ್ಸ್ ಹೇಳುತ್ತೇನೆ ..ಸಣ್ಣದೊಂದು  Risk  element  ಇಟ್ಟುಕೊಂಡೇ ಬದುಕು ಕಟ್ಟಿಕೊಳ್ಳುತ್ತೇನೆ... ನಮ್ಮಲ್ಲಿನ ಸಾಮರ್ಥ್ಯ ಸಾಬೀತಾಗಲು ಅಂತ ರಿಸ್ಕ್ ಗಳಿದ್ದರೆ ಚೆನ್ನ ಅಲ್ವ ?? ..ಸಧ್ಯ ಈ ರಿಸ್ಕ್ಗಳೆನ್ನೆಲ್ಲ ಒಪ್ಪಿಕೊಳ್ಳುವ ಗೆಳತಿಯೂ ನನ್ನೊಂದಿಗಿರುವುದರಿಂದ ಮತ್ತಷ್ಟು  ಧೈರ್ಯ ..


ಇದಿಷ್ಟು ನನ್ನ ೨೫ನೇ ಹುಟ್ಟುಹಬ್ಬದ ( ಹಬ್ಬವೆಂದು ಏಕೆ ಕರೀತಾರೋ ನನಗೆ ತಿಳಿಯದು)  ದಿನ ನನಗೆ ನಾನೆ ಅಂದುಕೊಂಡಿದ್ದು.. ಇನ್ನು ಮುಂದಿನ ೧೦ ವರ್ಷಗಳ ನಂತರ ನಾನು ಹೇಗಿರುತ್ತೇನೆ ? ಎಂದು ಮತ್ತೆ ಬರೆದು ನನ್ನಲ್ಲಿನ ನಾನು ಹೇಗೆ ಬದಲಾಗಿದ್ದೇನೆ ? ನನ್ನ  passion ಮತ್ತು  profession  ಗಳ ಅಂದಿನ ಸ್ತಿತಿ ಹೇಗಿದೆ ಎಂದು ವಿಮರ್ಷಿಸುತ್ತೇನೆ ... ಆಲ್ಲಿಯ ತನಕ   I wish myself a very happy birthday to first quarter of my life ......... ಹಾಗೂ ಇಲ್ಲಿತನಕ ನನ್ನ ಜೀವನೊತ್ಸಾಹವನ್ನು ಇಮ್ಮಡಿಗೊಳಿಸಿದ ಎಲ್ಲಾ  ಪಾಲುದಾರರಿಗೂ ನನ್ನ ಅನಂತ ಅಭಿನಂದನೆಗಳು .......

ಇಂತಿ ನನ್ನ ಪ್ರೀತಿಯ ,

ಶಿವೂ


   

Tuesday, June 14, 2011

" ಅಪ್ಪನ ಬಗ್ಗೆ ಬರೆಯಲೇಬೇಕೆನಿಸಿ... ಬರೆದದ್ದು ... "

                              


ನಾವೆಲ್ಲರೂ ಒಪ್ಪಿಕೊಳ್ಳಬೇಕಾದ ಚಿಕ್ಕದೊಂದು ಕಟು ಸತ್ಯ ಇದು. ಈ ಜಗತ್ತಿನ ಒಟ್ಟು ಸಾಹಿತ್ಯವನ್ನೆಲ್ಲ ಒಂದೆಡೆ ರಾಶಿ ಹಾಕಿಕೊಂಡು ನೋಡಿದರೆ ,ಅತೀ ಹೆಚ್ಚು ಬರೆಸಿಕೊಂಡ ವಸ್ತುವಿಷಯಗಳೆಂದರೆ ," ಪ್ರೀತಿ " ಮತ್ತು "ಅಮ್ಮ " .ಅಕ್ಷರಜ್ನಾನವಿರುವ ಪ್ರತಿಯೊಬ್ಬನೂ ಪ್ರೀತಿಯ ಬಗ್ಗೆ ಮುಲಾಜಿಗಾದರೂ ಒಂದೆರಡು ಸಾಲು ಬರೆದು ಕವಿಯೆನಿಸಿಕೊಂಡಿರುತ್ತಾನೆ .ಇನ್ನು ಅಮ್ಮ ನ ಮಮತೆ ,ವಾತ್ಸಲ್ಯ,ವಿನಯ ಗಳ ಬಗ್ಗೆ ಬರೆಯದವರೇ ಇಲ್ಲ.ತಮ್ಮ ಅವ್ವ ಸತ್ತಾಗ ಆಕೆ ಬದುಕಿದ ರೀತಿಯನ್ನು ಕುರಿತು ಪದ್ಯ ಬರೆದ ಪಿ. ಲಂಕೇಶ್ ಇದಾದ ೨೫ ವರ್ಶಗಳ ನಂತರ " ಅವ್ವ-೨" ಎಂಬ ಕವನ ಬರೆದು ತನ್ನಲ್ಲಿ ಈ ಅವ್ವ ಎಷ್ಟು ಉಳಿದುಕೊಂಡಿದ್ದಾಳೆ ಎಂದು ಸ್ಮರಿಸಿಕೊಳ್ಳುತ್ತಾರೆ. "ಮ್ಯಾಕ್ಸಿಂ ಗಾರ್ಕಿ"ಯ " Mother" ಎಂಬ ಪುಸ್ತಕ ಇವತ್ತಿಗೂ best seller.  " ನಮ್ಮಮ್ಮ ಅಂದ್ರೆ ನಂಗಿಷ್ಟ" ಅಂತ ಸಾಫ್ಟ್ ವೇರ್ ಉದ್ಯೋಗಿ  ವಸುಧೇಂದ್ರ ಬರೀತಾರೆ . ಕವಿತ ಲಂಕೆಶ್ " ಅವ್ವ" ಫಿಲಂ ಮಾಡಿದ್ರು. ಬರಗೂರರ "ತಾಯಿ" ಚಲನಚಿತ್ರ ಪ್ರಶಸ್ತಿ ಕೂಡ ಪಡೆಯಿತು . ಹೀಗೆ ಅಮ್ಮನ ಬಗ್ಗೆ ಬಂದ ಬರಹಗಳು  uncountable. ಆದರೆ ಅಮ್ಮ ಬರೆಸಿಕೊಂಡಷ್ಟು ಈ "ಅಪ್ಪ" ಎಂಬಾತ ಬರೆಸಿಕೊಳ್ಳಲಿಲ್ಲ. ನನ್ನ ಕಂಪ್ಲೇಂಟ್ ಅಮ್ಮನ ಬಗ್ಗೆ ಬರೆದಿರುವುದಕ್ಕಲ್ಲ. ಅಪ್ಪನ ಬಗ್ಗೆಯೂ ನಿಮಗೆ ಕೊಂಚ  ತಿಳಿಸುವುದು ನನ್ನ ಹಪಹಪಿಯಷ್ಟೆ.

ಅಪ್ಪ ಎಂದರೆ ಪ್ರೀತಿ, ಆತ ಯಜಮಾನ, ಆತ  Responsibility, ಆತ ಕಾಳಜಿ, ಆತ ಉಗ್ರ ಕೋಪಿ , ಆತ ಶಾಂತ, ಆತ ಮೂರ್ಖ, ಆತ ನಿಸ್ಪ್ರಹ ಪ್ರೀತಿಯ ಮೂರ್ತಿ . ನಿಮ್ಮ ಅಮ್ಮ ನಿಮಗೊಂದು ' intero- personal behaviour '  ರೂಪಿಸಿಕೊಡಲು ಪ್ರಯತ್ನಿಸುತ್ತಾಳೆ.  ಅಪ್ಪ ಮಾತ್ರ ನಿಮಗೊಂದು ಸ್ವಚ್ಛಂದದ CAREER  ರೂಪಿಸಿಕೊಡುವ ಹವಣಿಕೆಯಲ್ಲಿರುತ್ತಾನೆ. ಅತನ ಎಲ್ಲ ಸಿಟ್ಟು, ಸೆಡೆವು , ಗದರಿಕೆಗಳ ಹಿಂದಿರುವ ಉದ್ದೇಶ ನಿಮ್ಮ ಹಿತವೊಂದೆ . ದೂರದೂರಿಂದ ಜಾತ್ರೆಯಲ್ಲಿ ನಿಮಗೊಂದು ಆಟಿಕೆ ತಂದುಕೊಟ್ಟು ಮುದ್ದಾಡುವ ಅಪ್ಪ, ನೀವು ತಪ್ಪು ದಾರಿ ಹಿಡಿಯುತ್ತಿದ್ದೀರೆಂಬ ಚಿಕ್ಕ  hint  ಸಿಕ್ಕರೂ ಸಾಕು ಕೆಂಡವಾಗಿಬಿಡುತ್ತಾನೆ . ಆ ರಾತ್ರಿ ನಿಮಗೆ ಬೆತ್ತದ ರುಚಿ ತೋರಿಸುತ್ತಾನೆ. ಆಗ ಅಮ್ಮ ನಿಮ್ಮನ್ನು ಸಂತೈಸುತ್ತ ಅಪ್ಪನನ್ನು ಬೈದುಕೊಳ್ಳುತ್ತಾಳೆ . ಹೀಗಾಗಿಯೇ ಆಕೆ ಮತ್ತಷ್ಟು ಆಪ್ತವಾಗುತ್ತಾಳೆ . ನೆನಪಿಡಿ, ನಮ್ಮ ಬದುಕು ನೆಲೆಕಾಣಬೇಕಾದರೆ ಅಪ್ಪನ ಬೆತ್ತದ ರುಚಿ ಮತ್ತು ಅಮ್ಮನ ಸಾಂತ್ವನಗಳ  Combination ನಿಂದ ಮಾತ್ರ ಸಾಧ್ಯ..

ಮಹತ್ತರವಾದುದೊಂದು ಓದಿಬಿಡುತ್ತೇನೆ , ಏನೋ ಸಾಧಿಸಿಬಿಡುತ್ತೇನೆಂದು ನೀವು ಲಗ್ಗೇಜ್ ರೆಡಿಮಾಡಿಕೊಂಡು ದೂರದ ಪಟ್ಟಣಕ್ಕೆ ಹೊರಟು ನಿಂತಿರುತ್ತೀರಿ.ಆಗ ತನ್ನ ಪಂಚೆಯೊಳಗಿನ ನಿಕ್ಕರ್ ನಿಂದ ಹಣ ತೆಗೆದುಕೊಟ್ಟು , ಬಸ್ ಸ್ಟಾಪ್ ತನಕ ಬಂದು , ಒಂದಷ್ಟು ಮಾತ್ರೆ, ಒಂದು  Amrutaanjan  ಬಾಟಲ್ , Parle-G  ಬಿಸ್ಕೆತ್ ಪ್ಯಾಕ್ ಕೊಟ್ಟು, ತನ್ನ ಅಂಗಿ ಕಿಸೆಯಲ್ಲಿದ್ದ ಕೊನೆಯ 100  ರೂಪಾಯಿಯನ್ನೂ ನಿಮ್ಮ ಕಿಸೆಗೆ ತುರುಕಿ " ಅದು ಪಟ್ಟಣ ಅಲ್ಲಿ ಖರ್ಚು ಭಾಳ ಇರುತ್ತೆ ಇಟ್ಕೊ " ಅಂತ ಹೇಳಿ ತನ್ನ ಕಣ್ಣಂಚಲ್ಲಿ ಸಣ್ಣಗೆ ತೇವಮಾಡಿಕೊಂಡು ಮರೆಯಾಗುತ್ತಾನಲ್ಲ ಅದಕ್ಕೆ ಅಪ್ಪನೇ ಬೇಕು . ತನ್ನ ಕಷ್ಟಗಳನ್ನು ಅಮ್ಮ ಕೂಗಾಡಿಕೊಳ್ಳಬಹುದು ಆದರೆ ಅಪ್ಪ ಎಂದೂ ಅವನ್ನು ಬಿಚ್ಚಿಡಲಾರ. ಮಕ್ಕಳನ್ನು ಪರಿಪೂರ್ಣವಾಗಿಸಲು ತಾನು ಪೂರ್ತಿ ಖಾಲಿಯಾಗಲು ಸಿದ್ದನಾಗುತ್ತಾನಲ್ಲ ಅದಕ್ಕೇ ಈ ಅಪ್ಪನ ಕುರಿತು ಬರೀಬೇಕು ಅನ್ನಿಸಿದ್ದು . ನಮ್ಮ ಎಲ್ಲ ಬೇಕುಗಳನ್ನೂ ಅಪ್ಪನೇ ಪೂರೈಸುತ್ತಾನಾದರೂ ಅವು ಅಮ್ಮನ  Recommandation  ನಿಂದಲೇ ಆಗುವುದರಿಂದಾಗಿ ಅಮ್ಮ ನಮ್ಮನ್ನು ಸಂವೇದನೆಗೊಳಪಡಿಸಿದಷ್ಟು ಈ ಅಪ್ಪ ಮಾಡಲಾರ . ಪ್ರಾಯಷ: ಇದಕ್ಕೆ ಇರಬೇಕು  Mother's Day  ಯಂದು ಬರುವ ವಿಶೇಷ ಲೆಖನಗಳು  Father's day  ಯಂದು ಯಾವ ಪತ್ರಿಕೆಗಳಲ್ಲೂ  ಇರೊಲ್ಲ . ಅಮ್ಮನ ಬಗ್ಗೆ ಬರಿ  Feminist  ಗಳಷ್ಟೇ ಅಲ್ಲ ಪುರುಷರೂ ಜಾಸ್ತಿ ಬರಿತಾರೆ .ಆದ್ರೆ ಅಪ್ಪ ಬರಹಕ್ಕೆ ದಕ್ಕಿರುವುದು ತೀರ ವಿರಳ . ಅಕಸ್ಮಾತ್ ದಕ್ಕಿದರೂ ಅಲ್ಲಿ ಅಪ್ಪನ ಸಿಟ್ಟು, ಸೆಡೆವು, ಒರಟುತನ, ಹಾದರ, ಮೂರ್ಖತನಗಳೆ ಬಿಂಬಿಸಲ್ಪಟ್ಟಿರುತ್ತವೆ. ಅಡುಗೆ ಮನೆಯ ಒಡತಿ ಅಮ್ಮನೇ ಆದರೂ ಅಪ್ಪನಿಗೆ ಅಕ್ಕಿ, ಬೇಳೆ , ಉಪ್ಪು , ಎಣ್ಣೆ , ಯಾವ್ಯಾವ ಡಬ್ಬದಲ್ಲಿವೆ , ಯಾವುದು ಖಾಲಿಯಾಗಿದೆ ಎಂಬುದರ ಸ್ಪಷ್ಟ ಮಾಹಿತಿ ಇರುತ್ತದೆ .

ಕೊನೆಯದಾಗಿ,ಅಪ್ಪನ ಬಗ್ಗೆ ಬರೆಯಲೇಬೇಕೆನಿಸಿದ್ದು ಏಕೆ ಎಂದು ಹೇಳಿ ಮುಗಿಸುತ್ತೇನೆ .ನನ್ನ ಕಂಪನೆಯಲ್ಲಿ " Family day "  ಇತ್ತೆಂದು ಅಪ್ಪ ಅಮ್ಮ ಬೆಂಗಳೂರಿಗೆ ಬಂದಿದ್ರು. ಒಂದು ವಾರ ಇಲ್ಲಿದ್ದರು. ಅಮ್ಮನ ಕೈಡುಗೆ ತಿಂದು ಆಫೀಸ್ ಗೆ ಹೊರಟು ನಿಂತಾಗ ಅಪ್ಪ ತನ್ನ ಅದೇ ಹಳೇ ವರಸೆಯಲ್ಲಿ " ದುಡ್ಡು ಐತೇನೋ ? ಕೊಡ್ಲಾ ? " ಅಂತ ಕೇಳ್ತಿದ್ರು . ಹಳ್ಳಿ ಶೈಲಿಗೆ ಹೊಂದಿಕೊಂಡಿರುವ ಅವರಿಗೆ ಈ ಬಿಂದಾಸ್ ಬೆಂಗಳೂರಿನ ಪ್ರತಿಯೊಂದು ವಿಶೇಷವಾಗಿಯೇ ಕಾಣಿಸುತಿತ್ತು . ಬಿ ಎಮ್ ಟಿ ಸಿ  ಬಸ್ ನಲ್ಲಿ ಅವರನ್ನು ಒಂದು ವಾರ ಸುತ್ತಾಡಿಸುವದರಲ್ಲಿ ಸಾಕಾಗಿಹೋಯ್ತು . ರೋಡ್ ಕ್ರಾಸ್ ಮಾಡುವಾಗ ಅಪ್ಪ ಅಮ್ಮನ ಕೈಯನ್ನು ಎಷ್ಟು ಬಿಗಿಯಾಗಿ ಹಿಡಿದಿರುತ್ತಿದ್ದರೆಂದರೆ , ಥೇಟ್ ಮದುವೆ ಮಂಟಪದಲ್ಲಿ ಹಿಡಿದಿರುವಂತೆ ಕಾಣುತ್ತಿತ್ತು. ಅದೆಂತಾ ಕಾಳಜಿ, ಭರವಸೆ ಆ ಹಿಡಿತದಲ್ಲಿತ್ತು !!

ಶಿವಮೊಗ್ಗಕ್ಕೆ ಹೊರಟುನಿಂತ ಟ್ರೈನಿ ನಲ್ಲಿ ಅಪ್ಪ-ಅಮ್ಮನನ್ನು ಬೀಳ್ಕೊಡುವಾಗ ಮಾತ್ರ ನನಗೇ ಗೊತ್ತಿಲ್ಲದೆ,ನಾನೂ ಅಪ್ಪನಂತೆ ವರ್ತಿಸಿಬಿಟ್ಟೆ. ಮನೆಯಲ್ಲೇ ಅಪ್ಪನಿಗೆ ದುಡ್ಡು ಕೊಟ್ಟಿದ್ದೆನಾದರೂ ATM ನಲ್ಲಿದ್ದ ಕೊನೆಯ 100  ರೂಪಾಯಿಯನ್ನು ತೆಗೆದುಕೊಂಡು ಬಂದು ಅಪ್ಪನ ಕೈಗಿತ್ತು "  salary  ಆದ ತಕ್ಷಣ ಮತ್ತೆ ಹಣ ಕಳಿಸ್ತೀನಪ್ಪ " ಎಂದೆ. ಆಗ ಕಾಲೇಜು ದಿನಗಳಲ್ಲಿ ನಾನು ನಮ್ಮೊರಿನ ಬಸ್ ಸ್ಟಾಪ್ ನಲ್ಲಿ ಕಾಯುತ್ತ ನಿಂತಾಗ  ಅಪ್ಪ ಕೊಡುತ್ತಿದ್ದ ಕೊನೆಯ 100  ರೂಪಾಯಿ ನೆನಪಾಯಿತು. ನಾವು ಎಷ್ಟೆ ಸಾವಿರ ಅಪ್ಪನಿಗೆ ಕೊಟ್ಟರೂ ಆ 100  ರೂಪಾಯಿಯ ಬೆಲೆಯೇ ಬೇರೆಯಲ್ಲವೆ ?

ಕೊನೆಮಾತು :
 June 19  ಭಾನುವಾರ " Father's day "  ಯಲ್ಲವೆ ಅದಕ್ಕೆ ಇಷ್ಟೆಲ್ಲ ನೆನಪಾಯಿತು . ನಿಜ ಹೇಳ್ಬೇಕಂದ್ರೆ ಅಮ್ಮನ ಬಗ್ಗೆ ನಾನೂ ಹತ್ತಾರು ಕವನ ಬರೆದಿದ್ದೆ. ಆದರೆ ನನ್ನ ಅಕ್ಷರ ಪ್ರೀತಿ ಅಪ್ಪನೆಡೆಗೆ ಹರಿದದ್ದು ಇದೇ ಮೊದಲು . ಸದ್ಯಕ್ಕೆ ನಾನು ಅಷ್ಟಾದರೂ ಋಣ ಕಡಿಮೆ ಮಾಡಿಕೊಂಡಿದೀನಿ. ಮತ್ತೆ ನೀವು ?? ನಿಮ್ಮವ,

ಶಿವಕುಮಾರ್ ಮಾವಲಿ .

Friday, March 18, 2011

ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾನು ......

ಐತಿಹಾಸಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಮತ್ತು ಕೆಲವು ಕಾರ್ಯಕ್ರಮಗಳನ್ನು ನೀಡಲು ನನಗೆ 
ಶಿವಮೊಗ್ಗದ ನಮ್ಮ ಕಲಾ ತಂಡವಾದ " ಹೊಂಗಿರಣ" ದಿಂದಾಗಿ ಸಾಧ್ಯವಾಯಿತು .. ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು 
ಹೆಮ್ಮೆಯ ಸಂಗತಿ .... ಮೂರು ದಿನ ಎಲ್ಲೆಲ್ಲೂ ಕನ್ನಡ .. ಕನ್ನಡ .. ಕನ್ನಡ ... ಗಡಿನಾಡಲ್ಲಿ ಕನ್ನಡದ ಕಂಪು ಪಸರಿಸಿದ ಈ ವೈಭವೋಪಿತ  ಹಬ್ಬದಲ್ಲಿ ಇದ್ದು , ಸಂಭ್ರಮಿಸಿದ್ದು ನನ್ನ ಪಾಲಿನ ಮಧುರ ಕ್ಷಣ ... ಈ ಕ್ಷಣದ ಕೆಲವು ಝಲಕುಗಳು ... .....                                               ನಿಮ್ಮ ಶಿವೂ ....

Sunday, March 6, 2011

ಅದನ್ನೇಕೆ  "ಮರ್ಯಾದಾ ಹತ್ಯೆ" ಎನ್ನಬೇಕಲ್ಲವೇ  ????

ಅಂತೂ ಕೇವಲ ಉತ್ತರ ಭಾರತದಲ್ಲಿದ್ದ  ಆ ಮರ್ಯಾದಾ ಹತ್ಯೆ ಎಂಬ ಪಿಡುಗು ಕರ್ನಾಟಕಕ್ಕೂ ನುಗ್ಗಿಬಿಟ್ಟಿದೆ.
ಕನಕಪುರದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಹುಡುಗಿಯೊಬ್ಬಳನ್ನು ಜನ್ಮ ಕೊಟ್ಟ ತಂದೆ ತಾಯಿಗಳೇ ಇಟ್ಟಿಗೆಯಿಂದಹೊಡೆದು ,ಜಜ್ಜಿ ಜಜ್ಜಿ ಸಾಯಿಸಿದ್ದಾರೆ . ಅದೂ ಅವಳ ಹಸುಳೆ ಕಂದಮ್ಮನನ್ನೂ  ಸೇರಿಸಿ ಕೊಂದುಹಾಕಿದ್ದಾರೆ .ಕೇವಲ ಜಾತಿಯ ನೆಪದಲ್ಲಿ ಹೆತ್ತ ಮಗಳನ್ನೂ ಮೊಮ್ಮಗನನ್ನೂ ಕೊಂದ ಪಾತಕಿಗಳ ಈ ಕೃತ್ಯವನ್ನು ಮಾಧ್ಯಮಗಳು" ಮರ್ಯಾದಾ ಹತ್ಯೆ " ಎಂದು ಕರೆಯುತ್ತಿವೆ ... ಯಾವ ಮರ್ಯಾದೆ ? ಯಾರ ಮರ್ಯಾದೆ ಉಳಿಯಿತು ಈ ಹತ್ಯೆಯಿಂದ ?ಮಾತೆತ್ತಿದರೆ ೨೧ನೇ  ಶತಮಾನ , ವೈಜ್ಞಾನಿಕತೆ , ತಾಂತ್ರಿಕತೆ ಅಂತೆಲ್ಲ ಮಾತಾಡುವಾಗ ಇದೇನು ಮರ್ಯಾದೆ ಗಾಗಿ ಮಾಡಿದ ಹತ್ಯೆಯಾ ? ಮೂರೂ ಬಿಟ್ಟವರೇ ಇಂತ  ಕುಕೃತ್ಯಕ್ಕೆ ಕೈ ಹಾಕುತ್ತಾರಷ್ಟೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೊಂದು ಪರಿಹಾರ ಹುಡುಕಬೇಕಿದೆ . " ನಿಮಗೆ ಸಾಯುತ್ತಿರುವ ಒಂದು ಜೀವವನ್ನು ಉಳಿಸುವ ಶಕ್ತಿ ಇಲ್ಲ ಅನ್ನುವುದಾದರೆ , ಒಂದು ಜೀವವನ್ನು ಕೊಲ್ಲಲು ಹಕ್ಕು ಎಲ್ಲಿಂದ ಬಂತು ?"  ಜನ್ಮ ಕೊಟ್ಟ ಮಾತ್ರಕ್ಕೆ ನೀವು ಆ ಜೀವಗಳನ್ನು ಹೇಗೆ ಇಲ್ಲವಾಗಿಸಬಹುದು???  ಪ್ರೀತಿಸಿದವರನ್ನು ನಿಮಗೆ ಒಪ್ಪಿಕೊಳ್ಳಲು ಆಗದಿದ್ದರೆ,ನಿಮ್ಮ ಜಾತಿ ಅಂತಸ್ತುಗಳೇ ನಿಮಗೆ  ಹೆಚ್ಚಾದರೆ, ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ ... ಇದನ್ನು " ಅಮಾನವೀಯ ಹತ್ಯೆ " ಎನ್ನಬಹುದೇ ಹೊರತು ' ಮರ್ಯಾದ ಹತ್ಯೆ ' ಎಂದಲ್ಲ .ರಾಜಕಾರಣಿಗಳು ಈ ವಿಷಯವನ್ನು ಜಾತಿ ಆಧಾರಿತ ವೋಟುಗಳ  ವಿಷಯಕ್ಕೆ ಬಳಸಿಕೊಳ್ಳದೆ , ಸೂಕ್ತ ಕ್ರಮ ಕೈಗೊಳ್ಳಬೇಕಿದೆ ."ಕೊಂದವರು ಉಳಿದರೆ ಕೂಡಲ ಸಂಗಮ ? " ಎನ್ನುವಂತೆ , ಪಾತಕಿಗಳು ಸಾಕಷ್ಟಿರುವ ಈ ಸಮಾಜಕ್ಕೆ ಹೆತ್ತವರೇ , ನಮ್ಮವರೇ ನಮ್ಮನ್ನು ಕೊಲ್ಲಲು ತಯಾರಾಗುವ ಈ " HONOR KILLING "  ಬೇಡವೇ ಬೇಡ . ಈ ಕೊಲೆಯಿಂದ ಯಾರ  honor ಕೂಡ ಹೆಚ್ಚುವುದಿಲ್ಲ . ನಮ್ಮಲ್ಲಿನ ದಾನವತ್ವ ಪ್ರದರ್ಶನವಾಗುತ್ತದೆ ಅಷ್ಟೆ. ಬನ್ನಿ ಒಟ್ಟಾಗಿ ಹೇಳೋಣ : ' ಇದು  Honor- Killing ಅಲ್ಲ ಬದಲಾಗಿ Inhumane -Killing " .. ಬದುಕುವ ಹಕ್ಕಿಗೆ  ರಕ್ಷಣೆ  ಕೊಡುವವರು ಯಾರು ? ಧಿಕ್ಕಾರವಿರಲಿ ನಿಮ್ಮ ಜಾತಿ -ಅಂತಸ್ತು ಗಳ ಕಲ್ಪನೆಗೆ .!! ಬದಲಾಗುವ ಕಾಲದ  ನಿರಂತರತೆಗೆ ಹೊಂದುವ  ಮನಸ್ಸು ನಿಮ್ಮದಾಗಲಿ .. ದೇವರೆಂಬ ಶಕ್ತಿ ,ಪ್ರಾಣಿ ,ಮನುಷ್ಯ ,ವಸ್ತು ,ಕಲ್ಪನೆ ಇರುವುದೇ ನಿಜವಾದರೆ , ಈ Killer ಗಳ ಮನ ಪರಿವರ್ತನೆಯಾಗಲಿ ... ಜೊತೆಯಲ್ಲಿ ಬದುಕಿ .ಸಾಧ್ಯವಾಗಲಿಲ್ಲವಾ ಬದುಕಲು ಬಿಟ್ಟುಬಿಡಿ ...

ನಿಮ್ಮವ ,

ಶಿವೂ

Sunday, January 23, 2011

ಹೌದೂ, ಹಾಗಾದರೆ ನಾವೇಕೆ ಆಟೋಗ್ರಾಫ್ ಬರೆಸುತ್ತೇವೆ ....???

        ಹೌದೂ,  ಹಾಗಾದರೆ ನಾವೇಕೆ ಆಟೋಗ್ರಾಫ್ ಬರೆಸುತ್ತೇವೆ ....???

      ಹೊರಗೆ ಉರಿಯುವ ಬಿಸಿಲು .ಮನದೊಳಗೆ ಆತಂಕ.ತೆರೆಯದೇ ಇಟ್ಟ ಪುಸ್ತಕಗಳಿಗಾಗಿ ಹುಡುಕಾಟ. ಇವು ವರ್ಷಾಂತ್ಯದ ಪರೀಕ್ಷೆಗಳು ಹತ್ತಿರ ಬರುತ್ತಿರುವುದರ ಲಕ್ಷಣಗಳು. ವರ್ಷವಿಡೀ ತೋರದ ಕಾಳಜಿ ಮತ್ತು ಜವಬ್ದಾರಿಗಳು ವಿದ್ಯಾರ್ತಿಗಳಿಗೆ  ಈ ಸಮಯದಲ್ಲಿ ಮೈಗೂಡಿಬಿಡುತ್ತದೆ.ಈ ಸಮಯದಲ್ಲಿ ಅವರು ತಮ್ಮ ನೋಟ್ಸ್ ಬುಕ್ ಮತ್ತು study material ಗಳ ಹುಡುಕಾಟಕ್ಕಿಂತ  ವಿಶಿಷ್ಟವಾಗಿ ಗಮನಿಸಬೇಕಾದ್ದು, " ಆಟೋಗ್ರಾಫ್ ಬರೆಸಲು" ಅವರು ಹಂಬಲಿಸುವ ಪರಿ. ಕಾರಿಡಾರ್ ಮೇಲೆ ಓಡಾಡುವವರೆಲ್ಲರ ಕೈಯಲ್ಲೊಂದು ಪುಟ್ಟ ಆಟೋಗ್ರಾಫ್ ಇರುತ್ತದೆ. ತಮಗಿಷ್ಟವಾದ ಗುರುಗಳ,ಗೆಳೆಯರ., ಗೆಳತಿಯರಿಂದ ತಮ್ಮ ಬಗ್ಗೆ ಒಂದಿಷ್ಟು ಬರೆಸಿಕೊಳ್ಳಲು ಎಲ್ಲರೂ ಕಾತರದಿಂದ ಕಾದಿರುತ್ತಾರೆ. ಅರ್ಧ ಟೀ ಕುಡಿಯಲು ಸಹ ಚೌಕಾಸಿ ಮಾಡುವವ 50 ರೂಪಾಯಿ ಕೊಟ್ಟು ಹಸ್ತಾಕ್ಷರದ ಪುಟ್ಟ ಪುಸ್ತಕವನ್ನು ಕೊಂಡಿರುತ್ತಾನೆ. ಕಾಲೇಜ್ ದಿನಗಳಲ್ಲಿ ಒಮ್ಮೆಯೂ ಮಾತನಾಡದವರೂ ಕೂಡ ಈ ಆಟೋಗ್ರಾಫ್ ನಲ್ಲಿ "ಆತ್ಮೀಯ ಗೆಳೆಯ(ತಿ) ರಾಗಿರುತ್ತಾರೆ. ಅಲ್ಲಿ ನಮಗೊಂದಿಷ್ಟು ಪುಕ್ಕಟೆ ಸಲಹೆಗಳು,ನಮ್ಮ ಬಗ್ಗೆ ಮುಜುಗರ ತರಿಸುವಂತ ಕಾಂಪ್ಲಿಮೆಂಟ್ ಗಳು, ಜೀವನದ ಬಗ್ಗೆ ದೊಡ್ಡ ದೊಡ್ಡ ವ್ಯಾಖ್ಹ್ಯಾನಗಳು, ಫಿಲಾಸಫಿ ಗಳು, ನಮ್ಮ ಮಿತ್ರರ ಅತೀ personal ಅಭಿರುಚಿಗಳು ಮತ್ತು ಎಂದೋ ಕೊಟ್ಟ ನೋವಿಗೆ ಕೇಳುವ Sorry ಗಳು ಸಿಗುತ್ತವೆ. ನಮ್ಮ ಗುರುಗಳಾದವರು ನಮಗೊಂದಿಷ್ಟು ನುಡಿಮುತ್ತುಗಳನ್ನು ಬರೆದರೆ, ನಮ್ಮ ಆಪ್ತ ಸ್ನೇಹಿತರು ನಮ್ಮ  ವ್ಯಕ್ತಿತ್ವವನ್ನು ಸೆರೆಹಿಡಿಯುವಂತ ಬರಹಗಳನ್ನು ಬಿಂಬಿಸುತ್ತಾರೆ. ದಿಸೆಂಬರ್ ,ಜನವರಿ ನಂತರ ಡಿಗ್ರಿ ವಿದ್ಯಾಥಿಗಳು  ಕ್ಲಾಸ್ ರೂಮ್ ನತ್ತ ಸುಳಿಯುವುದಿಲ್ಲವಾದರೂ , ಕೈಲ್ಲೊಂದು ಚಿಕ್ಕ ಆಟೋಗ್ರಾಫ್ ಹಿಡಿದು ಕ್ಯಾಂಪಸ್ ನಲ್ಲಿ ಅಲೆದಾಡುವುದು ಸಾಮಾನ್ಯವಾಗಿರುತ್ತದೆ.  ಕೆಲವೊಮ್ಮೆ " Regularly irregular" ಸ್ಟೂಡೆಂಟ್ ಗಳೂ ಸಹ ಈ ಆಟೋಗ್ರಾಫ್ ಬರೆಯಲು ಕೊಟ್ಟಾಗ ,'ಇವನು ನಮ್ಮ ಕ್ಲಾಸ್ ಮೇಟ್ ಆಗಿದ್ನಾ? ' ಎಂಬ ಗೊಂದಲವೂ ಉಂಟಾಗುತ್ತದೆ.
      ಹೌದೂ ಹಾಗಾದರೆ ನಾವೇಕೆ ಆಟೋಗ್ರಾಫ್ ಬರೆಸುತ್ತೇವೆ ....??  ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮನ್ನು      ಬೇರೆಯವರಿಂದ ಹೊಗಳಿಸಿಕೊಳ್ಳಲು.ನಿಜವಾಗಿಯೂ ಆಟೋಗ್ರಾಫ್ ಗಳು ನಮ್ಮ personality ಯನ್ನ ಯತಾವತ್ತಾಗಿ  ಸೆರೆಹಿಡಿಯಲಾರವು.  ಅದೇಕೊ ಅವು ಬರಿ ಪ್ರಶಂಸೆಗೇ ಜೋತುಬಿದ್ದಿರುತ್ತವೆ. ಅಗಲಿಕೆಯ ಹೊಸ್ತಿಲಲ್ಲಿ ಎಣ್ಣೆ ಸೀಗೆಕಾಯಂತೆ ಇದ್ದವರಲ್ಲೂ ಕೂಡ ಮೈತ್ರಿ ಭಾವನೆ ಮೂಡಿಬಿಡುತ್ತದೆ. ' ನನ್ನ ಮೈಯ ರಕ್ತ ಕೆಂಪಾಗಿರುವ ವರೆಗೊ ನಿನ್ನ ಮರೆಯಲಾರೆ ಮಿತ್ರ' ಎಂದು ಗೆಳೆಯನೊಬ್ಬ ಬರೆದುಬಿಟ್ಟಿದ್ದನೆಂದರೆ,ಎಂತಾ ಖುಷಿಯಾಗಬಹುದು??,ನಮ್ಮ ಬಗ್ಗೆ ಇತರರು ಬರೆದ ಪ್ರಶಂಸನೀಯ ಪದಪುಂಜಗಳು ನಮಗೇ ಮುಜುಗರವುಂಟು ಮಾಡುವಂತಿದ್ದರೂ ಮೂಕರಾಗಿ ಅವನ್ನೆಲ್ಲ ಒಪ್ಪಿಕೊಂಡುಬಿಡುತ್ತೇವೆ.ಅಲ್ಲಿ ಕೆಲವರಂತೂ ನಮ್ಮ ನಿರೆಕ್ಷೆಗೂ ಮೀರಿ ನಮ್ಮನ್ನು ಹಚ್ಛಿಕೊಂಡಿರುತ್ತಾರೆ.ಅವರ ಭಾವನೆಗಳ 'overflow'  ಹಾಳೆಗಳ ಮೇಲಾಗುತ್ತದೆ. " ಊರು ದೂರವಿದ್ದರೊ ಮನಸ್ಸು ಹತ್ತಿರವಿರಲಿ " ಎಂದು ಗೆಳೆಯ(ತಿ) ಬರೆದರೆ ಅದೆಂತ ಮಧುರ ಯಾತನೆಯಲ್ಲವಾ! ಮತ್ತೊಬ್ಬಳು ಗೆಳತಿ ಬರೆದಿರುತ್ತಾಳೆ, ' ಒಮ್ಮೆ ಕಟ್ಟಿದ ಸರಪಣಿಯನ್ನು ಎಂದೂ ಕತ್ತರಿಸದಿರು ಗೆಳೆಯ' ಎಂದು. ಆಟೋ ಗ್ರಾಫ್ ಗಳಲ್ಲಿ ಅದುವರೆಗೂ ಬಾಯಿಬಿಟ್ಟು ಹೇಳಲಾಗದ ಪ್ರೀತಿಯನ್ನು ಒಂದೆ ಸಾಲಿನಲ್ಲಿ ಬರೆದುಬಿಡಬಹುದು. ' ದೂರದೂರಿನಲ್ಲಿರುವ ಮಗುವನ್ನು ತಾಯಿ ಪ್ರೀತಿಸಿದಂತೆ ನಿನ್ನ ನನ್ನ ಸ್ನೆಹ ಕಣೋ,ಪ್ಲೀಸ್ ಮರೆಯದಿರು ಈ ಕನಸಿನ ಬಡವಿಯನ್ನು' ಎಂಬ ಸಾಲಿನಲ್ಲಿ ಗೌಪ್ಯವಾಗಿಟ್ಟ  ಪ್ರೀತಿಯಿಲ್ಲವೆ??. ಹಾಗೆ ತೀರ ಹತ್ತಿರದ ಮಿತ್ರನೊಬ್ಬ ಬರೆಯುತ್ತಾನೆ -" ಲೇ ನಾನೂ ಬರೀಬೇಕೆನೊ, ಹೇಳುವುದು , ಬರೆಯುವುದು, ಕೇಳುವುದನ್ನು ಮೀರಿದ್ದೂ ಒಂದು ಇದೆಯಲ್ಲ. ಅದು ನಮ್ಮಿಬ್ಬರಿಗೂ ಗೊತ್ತು. ಅದನ್ನು ಕೊನೆವರೆಗೂ ಜತನದಿಂದ ಕಾಪಾಡೋಣ". ಹೀಗೆ ಆಟೋಗ್ರಾಫ್ ತೀರಾ ಸಾಮಾನ್ಯರನ್ನೊ ಕವಿಯಾಗಿಸುತ್ತದೆ,ತತ್ವಜ್ನಾನಿಯಾಗಿಸುತ್ತದೆ. ಅಂದಹಾಗೆ SLAM BOOK ಗಳಲ್ಲಿ ಬರೆಸುವ ಆಟೋಗ್ರಾಫ್ ಗಳಲ್ಲಿ ಈ ಥ್ರಿಲ್ ಇರುವುದಿಲ್ಲ. ಅವು ಒಂತರ bio data information ಗಳಿದ್ದಂತೆ. ಡೈರಿ ಅಥವ ಅದೆಕ್ಕೆಂದೆ ಮೀಸಲಿಟ್ಟ ಬುಕ್ ಗಳಲ್ಲಿ ಮಾತ್ರ ಈ ಹಿತಾನುಭವ ಸಿಗುತ್ತದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ, ಆಟೋಗ್ರಾಫ್ ಗಳು ಸಿಪ್ಪೆ ಸುಲಿದಿಟ್ಟ ಬಾಳೆಹಣ್ಣಿನಂತೆ . ನೋಡುತ್ತ ಕೂತರೆ ರುಚಿ ಸವಿಯಲಾಗದು. ಅವನ್ನು ಓದಿಯೇ ಅನಿಭವಿಸಬೇಕು. ಮುಂದೆಂದೋ ನೀವು ದೊಡ್ಡದೊಂದು ಹುದ್ದೆಯಲ್ಲಿದ್ದಾಗಲೋ, ಬದುಕಿನ ವಿಚಿತ್ರ ತಿರುವುಗಳಲ್ಲಿ ಸಿಕ್ಕು ಸೀರುಂಡೆಯಾದಾಗಲೋ,ನಿಮ್ಮ ಮಗನನ್ನು ಕಾಲೆಜ್ ಗೆ ಸೇರಿಸಲು ಹೋದಾಗ ನಿಮ್ಮ ಕಾಲೇಜ್ ದಿನಗಳು ನೆನಪಾದಾಗಲೋ, ನೀವು ಅಂದುಕೊಂಡಷ್ಟು ಪ್ರೀತಿಸುವ ಸಂಗಾತಿ ಸಿಗದಿದ್ದಾಗಲೋ,ಇನ್ನೇನು ಮುಪ್ಪು ಬಂದೇಬಿಟ್ಟಿತು ಎನ್ನುವ ಕಾಲದಲ್ಲೋ ಅಥವ ಪ್ರೀತಿಸಿ ಕೈಕೊಟ್ಟವ(ನ)ಳ ಹೆಸರನ್ನು ನಿಮ್ಮ ಕಂದಮ್ಮನಿಗೆ ಇಡುವ ಸಮಯ ಬಂದಾಗಲೋ, ನೀವು ಈ ವರೆಗೆ ಬರೆಸಿಟ್ಟ ಆಟೋಗ್ರಾಫ್ ಪುಟಗಳನ್ನು ರಾತ್ರಿ ಮಲಗುವ ಮುನ್ನ ಕದ್ದು ತಗೆಯಿರಿ. ( ಆಗ ಕದ್ದೇ ಓದಬೇಕಾದ ಸ್ತಿತಿ ನಿಮ್ಮದು) ಏಕಾಂತದಲ್ಲಿ ,ಆ ರಾತ್ರಿಯ ನೀರವತೆಯಲ್ಲಿ ಓದಿ. ಒಂದೇ ಉಸಿರಿಗೆ ಎಲ್ಲ ಪುಟಗಳನ್ನೂ ಒದಿ ಮುಗಿಸಿಬಿಡುತ್ತೀರಿ.... ಆಗ ನೀವು " Bliss of Solitude " ಅಂತ ವರ್ಡ್ಸ್ವರ್ತ್ ಕವಿ ಹೇಳುವ ಪರಮಾನಂದದ ಸ್ತಿತಿಯಲ್ಲಿರುತೀರಿ. Can you try that ??


                                                                                      @ ಶಿವಕುಮಾರ್ ಮಾವಲಿ@

Wednesday, January 19, 2011

ಅಮ್ಮ ನೀ ನೆನಪಾಗುತ್ತೀ .....

                     ಅಮ್ಮ  ನೀ ನೆನಪಾಗುತ್ತೀ .....

                     ಅಮ್ಮ  ನೀ ನೆನಪಾಗುತ್ತೀ .....
                     ಮಹಿಳಾ ಮೀಸಲಾತಿ ವಿರುದ್ಧ ನಾ 
                     ಭಾಷಣ ಬಿಗಿಯುವಾಗಲೆಲ್ಲ ;
                    ಸ್ತ್ರೀ-ಶೋಷಣೆಗೆ ಗಂಡಸು ಮಾತ್ರ 
                    ಕಾರಣವಲ್ಲ  ಎಂದು ನಾ ಅಬ್ಬರಿಸುವಾಗಲೆಲ್ಲ ;

                    ಅಮ್ಮ  ನೀ ನೆನಪಾಗುತ್ತೀ .....      
                    ಆತ್ಮೀಯ ಗೆಳತಿ ತೋರಿಸುತ್ತಿದ್ದ 
                    ಪ್ರೀತಿ ಇನ್ನಿಲ್ಲದಾದಾಗ ;
                   ಬಸ್ ನಲ್ಲೊಬ್ಬಳು ಚಿಲ್ಲರೆ ತೆಗೆಯಲು 
                   ಬಾಗಿದ್ದಕ್ಕೆ ಸೆರಗು ಜಾರಿದಾಗ ;

                  ಅಮ್ಮ  ನೀ ನೆನಪಾಗುತ್ತೀ .....                    
                  ಬಿಕನಿಯಲ್ಲೇ ಬೀದಿಗೆ ಬಂದು
                  ನರ್ತಿಸುವವರ  ಕಂಡಾಗ ;
                 ಮಜೆಸ್ಟಿಕ್ ಬಳಿಯ ಹೆಣ್ಣೊಂದು 
                 ಹಣೆಯಿಂದಲೇ ಸಿಗ್ನಲ್ ಕೊಟ್ಟು ಕರೆದಾಗ ;

                 ಹೀಗೆ 'ಸ್ತ್ರೀ ' ಎಂಬ ರೂಪಕ   
                ಕೇಳಿದಾಗ ಮತ್ತೆ ನೋಡಿದಾಗ      
                ನೀನೆ ಕಣ್ಮುಂದೆ ನಿಲ್ಲುತ್ತೀಯಮ್ಮ .

                ಅಂದ ಹಾಗೆ, ಮೊನ್ನೆ ನಾನು ರಜೆಯಲ್ಲಿ 
                ಊರಿಗೆ ಬಂದಾಗ ನೀ ಹುಡುಕುತ್ತಿದ್ದ ,
                ನಮ್ಮನೆಯ 'ಕ್ಷೀರಮೂಲ ' ಗೌರಿ ಸಿಕ್ಕಳೆ ? 
               ಯಾರ ತೋಟಕ್ಕೆ, ಕದ್ದು ಮೇಯಲು ಹೋಗಿದ್ದಳವಳು ?
               ಅಪ್ಪನಿಂದ ನಿನಗೆ ಬೈಸಲಿಕ್ಕೆ !
  
               ಗೌರಿ ಯಂತ ಹಸು ಕಳೆದು ಹೋದ  ದಿನ
              ನೀ ಊಟ-ತಿಂಡಿ ,ನೀರು ಕೂಡ ಮುಟ್ಟಿರಲಿಲ್ಲವಲ್ಲ,
              ಹಾಗಾಗಿಯೇ  ನಿನ್ನ ನೆನಪು 
              ನನಗೆ ಮತ್ತೆ ಮತ್ತೆ ಕಾಡುತ್ತದೆ ಅಮ್ಮ .

                        @ ಶಿವಕುಮಾರ್ ಮಾವಲಿ@