Sunday, March 6, 2011

ಅದನ್ನೇಕೆ  "ಮರ್ಯಾದಾ ಹತ್ಯೆ" ಎನ್ನಬೇಕಲ್ಲವೇ  ????

ಅಂತೂ ಕೇವಲ ಉತ್ತರ ಭಾರತದಲ್ಲಿದ್ದ  ಆ ಮರ್ಯಾದಾ ಹತ್ಯೆ ಎಂಬ ಪಿಡುಗು ಕರ್ನಾಟಕಕ್ಕೂ ನುಗ್ಗಿಬಿಟ್ಟಿದೆ.
ಕನಕಪುರದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಹುಡುಗಿಯೊಬ್ಬಳನ್ನು ಜನ್ಮ ಕೊಟ್ಟ ತಂದೆ ತಾಯಿಗಳೇ ಇಟ್ಟಿಗೆಯಿಂದಹೊಡೆದು ,ಜಜ್ಜಿ ಜಜ್ಜಿ ಸಾಯಿಸಿದ್ದಾರೆ . ಅದೂ ಅವಳ ಹಸುಳೆ ಕಂದಮ್ಮನನ್ನೂ  ಸೇರಿಸಿ ಕೊಂದುಹಾಕಿದ್ದಾರೆ .ಕೇವಲ ಜಾತಿಯ ನೆಪದಲ್ಲಿ ಹೆತ್ತ ಮಗಳನ್ನೂ ಮೊಮ್ಮಗನನ್ನೂ ಕೊಂದ ಪಾತಕಿಗಳ ಈ ಕೃತ್ಯವನ್ನು ಮಾಧ್ಯಮಗಳು" ಮರ್ಯಾದಾ ಹತ್ಯೆ " ಎಂದು ಕರೆಯುತ್ತಿವೆ ... ಯಾವ ಮರ್ಯಾದೆ ? ಯಾರ ಮರ್ಯಾದೆ ಉಳಿಯಿತು ಈ ಹತ್ಯೆಯಿಂದ ?ಮಾತೆತ್ತಿದರೆ ೨೧ನೇ  ಶತಮಾನ , ವೈಜ್ಞಾನಿಕತೆ , ತಾಂತ್ರಿಕತೆ ಅಂತೆಲ್ಲ ಮಾತಾಡುವಾಗ ಇದೇನು ಮರ್ಯಾದೆ ಗಾಗಿ ಮಾಡಿದ ಹತ್ಯೆಯಾ ? ಮೂರೂ ಬಿಟ್ಟವರೇ ಇಂತ  ಕುಕೃತ್ಯಕ್ಕೆ ಕೈ ಹಾಕುತ್ತಾರಷ್ಟೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೊಂದು ಪರಿಹಾರ ಹುಡುಕಬೇಕಿದೆ . " ನಿಮಗೆ ಸಾಯುತ್ತಿರುವ ಒಂದು ಜೀವವನ್ನು ಉಳಿಸುವ ಶಕ್ತಿ ಇಲ್ಲ ಅನ್ನುವುದಾದರೆ , ಒಂದು ಜೀವವನ್ನು ಕೊಲ್ಲಲು ಹಕ್ಕು ಎಲ್ಲಿಂದ ಬಂತು ?"  ಜನ್ಮ ಕೊಟ್ಟ ಮಾತ್ರಕ್ಕೆ ನೀವು ಆ ಜೀವಗಳನ್ನು ಹೇಗೆ ಇಲ್ಲವಾಗಿಸಬಹುದು???  ಪ್ರೀತಿಸಿದವರನ್ನು ನಿಮಗೆ ಒಪ್ಪಿಕೊಳ್ಳಲು ಆಗದಿದ್ದರೆ,ನಿಮ್ಮ ಜಾತಿ ಅಂತಸ್ತುಗಳೇ ನಿಮಗೆ  ಹೆಚ್ಚಾದರೆ, ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ ... ಇದನ್ನು " ಅಮಾನವೀಯ ಹತ್ಯೆ " ಎನ್ನಬಹುದೇ ಹೊರತು ' ಮರ್ಯಾದ ಹತ್ಯೆ ' ಎಂದಲ್ಲ .ರಾಜಕಾರಣಿಗಳು ಈ ವಿಷಯವನ್ನು ಜಾತಿ ಆಧಾರಿತ ವೋಟುಗಳ  ವಿಷಯಕ್ಕೆ ಬಳಸಿಕೊಳ್ಳದೆ , ಸೂಕ್ತ ಕ್ರಮ ಕೈಗೊಳ್ಳಬೇಕಿದೆ ."ಕೊಂದವರು ಉಳಿದರೆ ಕೂಡಲ ಸಂಗಮ ? " ಎನ್ನುವಂತೆ , ಪಾತಕಿಗಳು ಸಾಕಷ್ಟಿರುವ ಈ ಸಮಾಜಕ್ಕೆ ಹೆತ್ತವರೇ , ನಮ್ಮವರೇ ನಮ್ಮನ್ನು ಕೊಲ್ಲಲು ತಯಾರಾಗುವ ಈ " HONOR KILLING "  ಬೇಡವೇ ಬೇಡ . ಈ ಕೊಲೆಯಿಂದ ಯಾರ  honor ಕೂಡ ಹೆಚ್ಚುವುದಿಲ್ಲ . ನಮ್ಮಲ್ಲಿನ ದಾನವತ್ವ ಪ್ರದರ್ಶನವಾಗುತ್ತದೆ ಅಷ್ಟೆ. ಬನ್ನಿ ಒಟ್ಟಾಗಿ ಹೇಳೋಣ : ' ಇದು  Honor- Killing ಅಲ್ಲ ಬದಲಾಗಿ Inhumane -Killing " .. ಬದುಕುವ ಹಕ್ಕಿಗೆ  ರಕ್ಷಣೆ  ಕೊಡುವವರು ಯಾರು ? ಧಿಕ್ಕಾರವಿರಲಿ ನಿಮ್ಮ ಜಾತಿ -ಅಂತಸ್ತು ಗಳ ಕಲ್ಪನೆಗೆ .!! ಬದಲಾಗುವ ಕಾಲದ  ನಿರಂತರತೆಗೆ ಹೊಂದುವ  ಮನಸ್ಸು ನಿಮ್ಮದಾಗಲಿ .. ದೇವರೆಂಬ ಶಕ್ತಿ ,ಪ್ರಾಣಿ ,ಮನುಷ್ಯ ,ವಸ್ತು ,ಕಲ್ಪನೆ ಇರುವುದೇ ನಿಜವಾದರೆ , ಈ Killer ಗಳ ಮನ ಪರಿವರ್ತನೆಯಾಗಲಿ ... ಜೊತೆಯಲ್ಲಿ ಬದುಕಿ .ಸಾಧ್ಯವಾಗಲಿಲ್ಲವಾ ಬದುಕಲು ಬಿಟ್ಟುಬಿಡಿ ...

ನಿಮ್ಮವ ,

ಶಿವೂ

No comments:

Post a Comment