Monday, November 29, 2010

ನ್ಯಾನೋ ಕಥೆ

                            " ಪ್ರತಿಫಲ "

ಆತ ಕಟ್ಟಾ ಪರಿಸರವಾದಿಯಾಗಿದ್ದ. ಮರಗಳನ್ನು 'ಅಪ್ಪಿಕೋ ' ಚಳುವಳಿಯಲ್ಲಿ  ಬಹುಗುಣ ಅವರ ಜೊತೆ ಸಕ್ರಿಯವಾಗಿ ಪಾಲ್ಗೊಂಡಿದ್ದ .ಅರಣ್ಯ ರಕ್ಷಣೆಗಾಗಿ ಮತ್ತು ಮರಗಳನ್ನು ಬೆಳೆಸಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ .ಒಂದು ದಿನ ಅರಣ್ಯ ರಕ್ಷಣೆ ಕುರಿತು ತನ್ನ ಅನುಯಾಯಿಗಳಿಗೆ ಭಾವನಾತ್ಮಕವಾಗಿ ಭಾಷಣ ಮಾಡುತ್ತಿದ್ದಾಗ ,ಅವನು ಯಾವ ಮರದಡಿಯಲ್ಲಿ ನಿಂತು ಭಾಷಣ ಮಾಡುತ್ತಿದ್ದನೋ ಅದೇ ಮರ ಅವನಮೇಲೆ ಮುರಿದುಬಿತ್ತು .ಪಾಪ,ಆತ ಸತ್ತೆ ಹೋದ . ಕೊನೆಗೆ ಅವನ ದೇಹವನ್ನು ಸುಡಲು ಅದೇ ಮರವನ್ನು ಬಳಸಿಕೊಳ್ಳಲಾಯಿತು ...ಇದನ್ನು ಏನೆನ್ನಬೇಕೋ ತಿಳಿಯುತ್ತಿಲ್ಲ . ದುರಂತವೆಂದರೆ 'ಶೇಕ್ಸ್ ಪಿಯರ್'ನ ಮ್ಯಾಕ್ ಬೆತ್ ,ಒಥೆಲೋ ,ಕಿಂಗ್ ಲಿಯರ್ .ರೋಮಿಯೋ ಜೂಲಿಯೆಟ್ ,ಗಳನ್ನು ಉದಾಹರಿಸುತ್ತೇವೆ, ಆದರೆ ಅವರೆಲ್ಲ ತಾವು ಮಾಡಿದ ತಪ್ಪುಗಳಿಗಾಗಿ ದುರಂತ ಸಾವು ಕಾಣಬೇಕಾಯಿತು . ಹಾಗಾದರೆ ,ಈ ಪರಿಸರವಾದಿಯದು  ನಿಜವಾದ ದುರಂತ ಅಲ್ಲವೇ ????

                                                                                                    @ಶಿವೂ@

                                
                                 

Thursday, November 25, 2010

                                                                  "   ಕೇಳೇ ಗೆಳತಿ .....  "                

 ಆಗ..
ನೀನಿದ್ದೆ .
ನಾನೂ ಇದ್ದೆ. 
    
ಈಗ .......?
ನೀನು ಇದ್ದೀಯ .
ನಾನು ಇದ್ದೇನೆ. 

ಆದರೆ....
ನಿನ್ನೊಡನೆ ನಾನಿದ್ದೇನೆ ನಿಜ .
ನನ್ನೊಡನೆ ನೀನಿಲ್ಲವೇ... ?

ಆದರೂ .....
ನಿನ್ನೊಂದಿಗೆ ನಾ ನಡೆದಾಡಿದ 
ಜಾಗಗಳಲ್ಲೆಲ್ಲ ನಾ ನಿನ್ನ ಅರಸುತ್ತೇನೆ .

ನೀ ಬರುವದಿಲ್ಲ ಎಂಬ 
ಖಚಿತ ಮಾಹಿತಿಯಿದ್ದರೂ 
ನಿನಗಾಗಿ  ಕಾಯುತ್ತ ಕೂರುತ್ತೇನೆ .

ನಿನಗೆ ಗೊತ್ತಾ,
ನಾವು ಕೂತು ಹರಟುತ್ತಿದ್ದ 
ಆ ಪಾರ್ಕಿನ ಬೆಂಚು ಕಲ್ಲಮೇಲೆ 
ಉದ್ದುದ್ದ ಹುಲ್ಲು ಬೆಳೆದು
ಕೊಯ್ಲಿಗೆ ಬಂದಿದೆ ಕಣೆ.

ಬಾಚಿ ತಬ್ಬಿಕೊಳ್ಳುತ್ತಿದ್ದ ನೀನು 
ಅದೇ ಪಾರ್ಕಲ್ಲೇ ತಾನೆ 
ಮತ್ತೆಂದೂ ತಬ್ಬಲಾರದಷ್ಟು 
ದೂರ 'ತಳ್ಳಿ' ಹೋಗಿದ್ದು!!.

ಒಂದು ಸತ್ಯ ಹೇಳಿಬಿಡುತ್ತೇನೆ ಕಣೆ ;
ಆಗ ನೀ ನನಗೆ ಕೊಟ್ಟಷ್ಟೇ ಪ್ರೀತಿಯನ್ನು 
ಈಗಲೂ ಮತ್ಯಾರಾದರೂ ಕೊಟ್ಟಾರು .
 
ಆದರೆ ...
ಈಗ ನೀ ಕೊಡುತ್ತಿರುವ 
ಯಾತನೆಯಿದೆಯಲ್ಲ ಅದನ್ನು 
ಯಾರೂ ಕೊಡಲಾರರು !!!

                                                                                                      @ ಶಿವೂ @

Sunday, November 14, 2010

ನ್ಯಾನೋ ಕಥೆಗಳು

                             " ಸಂಜೆ ಐದರ ಹುಡುಗಿ "


ಬೆಂಗಳೂರಿಂದ ಶಿವಮೊಗ್ಗಕ್ಕೆ ಬಸ್ ನಲ್ಲಿ ಹೋದರೆ ಏನಿಲ್ಲವೆಂದರೂ 6 ಗಂಟೆ ಬೇಕು . ಈ ಪ್ರಯಾಣದುದ್ದಕ್ಕೂ 
ಪಕ್ಕದಲ್ಲಿ ಕೂತ ಆ ಹುಡುಗಿ, ಒಂದೂ ಮಾತಾಡಿರಲಿಲ್ಲ . ಇನ್ನೇನು ಶಿವಮೊಗ್ಗದಲ್ಲಿ ಬಸ್ ಇಳಿದು ಹೋಗಬೇಕು 
ಇದ್ದಕ್ಕಿದ್ದಂತೆ  "ಧೋ" ಎಂದು ಮಳೆಸುರಿಯತೊಡಗಿತ್ತು. ಬಸ್ ಇಳಿದ ತಕ್ಷಣ ಸುರಿಯುತ್ತಿದ್ದ ಆ 'ಸಂಜೆ ಐದರ ' ಮಳೆಯಲ್ಲಿ 
ಅವಳು ಅಜಾಮತ್ತಾಗಿ ನನ್ನ ಕೈ ಹಿಡಿದು ಎಳೆದು ಹೋಟೆಲ್ ಅಶೋಕ ಕ್ಕೆ  ಕರೆದೊಯ್ದಳು. ಬಿಸಿ ಬಿಸಿ ಮಸಾಲೆ ದೋಸೆ ಆರ್ಡರ್ ಮಾಡಿದಳು. ಈ ನಡುವೆ ನಾನೆಷ್ಟೇ ಮಾತಾಡಿಸಿದರೂ ಒಂದೂ ಮಾತಾಡಲಿಲ್ಲ ಆ ಹುಡುಗಿ. ಸರಿ,ದೋಸೆ ಬಂತು . ತಿಂದದ್ದೂ ಆಯಿತು .ಬಿಲ್ ಬಂತು. ಅವಳೇ ಕೊಟ್ಟದ್ದೂ ಆಯಿತು. ನಾನು ಕೇಳಿದೆ , " ಇಗಲಾದರೂ ನಿಮ್ಮ ಹೆಸರು ಹೇಳುತ್ತೀರಾ ? ."  ಆಕೆ ಮಾತಾಡಲಿಲ್ಲ. 'ಆಟೋ ' ಎಂದು ಕೂಗಿದಳು . ಆಟೋ ಹತ್ತಿದಳು. ನಾನು 'ಪ್ಲೀಸ್ ಮೊಬೈಲ್ ನಂಬರ್ ಕೊಡ್ರಿ ಅಂದೆ'. ಉಹುಂ! ಏನೊಂದು ಮಾತಾಡಲಿಲ್ಲ ಆಕೆ. Atleast ,ಒಂದು bye  ಕೂಡ ಹೇಳದೆ ಹೋಗಿಬಿಟ್ಟಳು . ಇದಾಗಿ ಈಗ ಬರೋಬ್ಬರಿ 25 ವರ್ಷಗಳಾಯ್ತು . ಈಗಲೂ ನಾನು ಶಿವಮೊಗ್ಗಕ್ಕೆ ಹೋಗುವಾಗಲೆಲ್ಲ ಬಸ್ ನಲ್ಲಿ ಅವಳೆಲ್ಲಾದರೂ ಬರಬಹುದಾ ಅಂತಾ ಹುಡುಕಾಡುತ್ತೇನೆ. ಮತ್ತೂ ಶಿವಮೊಗ್ಗಕ್ಕೆ ಹೋದಾಗಲೆಲ್ಲ ಅಶೋಕ ಹೋಟೆಲ್ ನ ಆ ಟೇಬಲ್ ನಲ್ಲೇ ಕೂತು ಬಿಸಿ ಬಿಸಿ ದೋಸೆ ತಿಂದು ಬರುತ್ತೇನೆ. ಎಲ್ಲಿದ್ದೀಯೇ ಮಾರಾಯ್ತಿ ? ಹೇಗಿದ್ದೀಯೇ ? ಅಂತಾ ಪ್ರೀತಿಯಿಂದ ಬೈದುಕೊಂಡು ಬರುತ್ತೇನೆ. ಸಂಜೆ ಐದರ ಮಳೆ ಬಂದಾಗಲೆಲ್ಲ ಅವಳ ನೆನಪಾಗುತ್ತೆ. ..........!!!!

                                                                   @ ಶಿವೂ@











                          "  ಸತ್ತೇ ಹೋದ !!"
" ಅವನದು ತುಂಬಾ ವಿಚಿತ್ರ ವ್ಯಕ್ತಿತ್ವ . ಒಂದು ದಿನ ರಾತ್ರಿ ಮಲಗುವಾಗ ಕೂತು 
ತಾನು ಸಾಯಬಹುದಾದ ವಿವಿಧ ಬಗೆಗಳನ್ನು ಪಟ್ಟಿ ಮಾಡತೊಡಗಿದ . ಆಶ್ಚರ್ಯ ಅಂದರೆ 
ಅವನು ಒಟ್ಟು ೧೫೦ ರೀತಿ ಸಾಯಬಹುದಾದ ಸಾಧ್ಯತೆಗಳನ್ನು ಬರೆದೇಬಿಟ್ಟ .ಮರುದಿನ ಬೆಳಗ್ಗೆ 
ಪೇಪರ್ ಓದುತ್ತಿರುವಾಗ ಅವನ ಉಸಿರು ನಿಂತೇ ಹೋಗಿತ್ತು . ಅದಕ್ಕೆ ಏನು ಕಾರಣ ಎಂದು  
ಪತ್ತೆಹಚ್ಚಿದಾಗ ತಿಳಿದದ್ದು ಮಾತ್ರ, ಆ 150 ಕಾರಣಗಳನ್ನೂ ಬಿಟ್ಟು ಬೇರೆಯೇ ಆಗಿತ್ತು. ಆದರೆ ಆತ 
ಪಟ್ಟಿ ಮಾಡಿದ ಸಾವಿನ ಕಾರಣಗಳನ್ನೇ ಅವನ ಮಗ , " ನನ್ನ ಸಾವಿಗೆ ಕಾರಣಗಳು " ಎಂಬ ಶೀರ್ಷಿಕೆಯಡಿಯಲ್ಲಿ 
ಪುಸ್ತಕ ಪ್ರಕಟಿಸಿದ . ಆ ಪುಸ್ತಕ ಭಾರೀ ಮಾರಾಟ ಕಂಡು ಸಾವಿರಾರು ರೂಪಾಯಿ  ಲಾಭ ತಂದುಕೊಟ್ಟಿತು .

                                                           @ ಶಿವು@