ನಾವೆಲ್ಲರೂ ಒಪ್ಪಿಕೊಳ್ಳಬೇಕಾದ ಚಿಕ್ಕದೊಂದು ಕಟು ಸತ್ಯ ಇದು. ಈ ಜಗತ್ತಿನ ಒಟ್ಟು ಸಾಹಿತ್ಯವನ್ನೆಲ್ಲ ಒಂದೆಡೆ ರಾಶಿ ಹಾಕಿಕೊಂಡು ನೋಡಿದರೆ ,ಅತೀ ಹೆಚ್ಚು ಬರೆಸಿಕೊಂಡ ವಸ್ತುವಿಷಯಗಳೆಂದರೆ ," ಪ್ರೀತಿ " ಮತ್ತು "ಅಮ್ಮ " .ಅಕ್ಷರಜ್ನಾನವಿರುವ ಪ್ರತಿಯೊಬ್ಬನೂ ಪ್ರೀತಿಯ ಬಗ್ಗೆ ಮುಲಾಜಿಗಾದರೂ ಒಂದೆರಡು ಸಾಲು ಬರೆದು ಕವಿಯೆನಿಸಿಕೊಂಡಿರುತ್ತಾನೆ .ಇನ್ನು ಅಮ್ಮ ನ ಮಮತೆ ,ವಾತ್ಸಲ್ಯ,ವಿನಯ ಗಳ ಬಗ್ಗೆ ಬರೆಯದವರೇ ಇಲ್ಲ.ತಮ್ಮ ಅವ್ವ ಸತ್ತಾಗ ಆಕೆ ಬದುಕಿದ ರೀತಿಯನ್ನು ಕುರಿತು ಪದ್ಯ ಬರೆದ ಪಿ. ಲಂಕೇಶ್ ಇದಾದ ೨೫ ವರ್ಶಗಳ ನಂತರ " ಅವ್ವ-೨" ಎಂಬ ಕವನ ಬರೆದು ತನ್ನಲ್ಲಿ ಈ ಅವ್ವ ಎಷ್ಟು ಉಳಿದುಕೊಂಡಿದ್ದಾಳೆ ಎಂದು ಸ್ಮರಿಸಿಕೊಳ್ಳುತ್ತಾರೆ. "ಮ್ಯಾಕ್ಸಿಂ ಗಾರ್ಕಿ"ಯ " Mother" ಎಂಬ ಪುಸ್ತಕ ಇವತ್ತಿಗೂ best seller. " ನಮ್ಮಮ್ಮ ಅಂದ್ರೆ ನಂಗಿಷ್ಟ" ಅಂತ ಸಾಫ್ಟ್ ವೇರ್ ಉದ್ಯೋಗಿ ವಸುಧೇಂದ್ರ ಬರೀತಾರೆ . ಕವಿತ ಲಂಕೆಶ್ " ಅವ್ವ" ಫಿಲಂ ಮಾಡಿದ್ರು. ಬರಗೂರರ "ತಾಯಿ" ಚಲನಚಿತ್ರ ಪ್ರಶಸ್ತಿ ಕೂಡ ಪಡೆಯಿತು . ಹೀಗೆ ಅಮ್ಮನ ಬಗ್ಗೆ ಬಂದ ಬರಹಗಳು uncountable. ಆದರೆ ಅಮ್ಮ ಬರೆಸಿಕೊಂಡಷ್ಟು ಈ "ಅಪ್ಪ" ಎಂಬಾತ ಬರೆಸಿಕೊಳ್ಳಲಿಲ್ಲ. ನನ್ನ ಕಂಪ್ಲೇಂಟ್ ಅಮ್ಮನ ಬಗ್ಗೆ ಬರೆದಿರುವುದಕ್ಕಲ್ಲ. ಅಪ್ಪನ ಬಗ್ಗೆಯೂ ನಿಮಗೆ ಕೊಂಚ ತಿಳಿಸುವುದು ನನ್ನ ಹಪಹಪಿಯಷ್ಟೆ.
ಅಪ್ಪ ಎಂದರೆ ಪ್ರೀತಿ, ಆತ ಯಜಮಾನ, ಆತ Responsibility, ಆತ ಕಾಳಜಿ, ಆತ ಉಗ್ರ ಕೋಪಿ , ಆತ ಶಾಂತ, ಆತ ಮೂರ್ಖ, ಆತ ನಿಸ್ಪ್ರಹ ಪ್ರೀತಿಯ ಮೂರ್ತಿ . ನಿಮ್ಮ ಅಮ್ಮ ನಿಮಗೊಂದು ' intero- personal behaviour ' ರೂಪಿಸಿಕೊಡಲು ಪ್ರಯತ್ನಿಸುತ್ತಾಳೆ. ಅಪ್ಪ ಮಾತ್ರ ನಿಮಗೊಂದು ಸ್ವಚ್ಛಂದದ CAREER ರೂಪಿಸಿಕೊಡುವ ಹವಣಿಕೆಯಲ್ಲಿರುತ್ತಾನೆ. ಅತನ ಎಲ್ಲ ಸಿಟ್ಟು, ಸೆಡೆವು , ಗದರಿಕೆಗಳ ಹಿಂದಿರುವ ಉದ್ದೇಶ ನಿಮ್ಮ ಹಿತವೊಂದೆ . ದೂರದೂರಿಂದ ಜಾತ್ರೆಯಲ್ಲಿ ನಿಮಗೊಂದು ಆಟಿಕೆ ತಂದುಕೊಟ್ಟು ಮುದ್ದಾಡುವ ಅಪ್ಪ, ನೀವು ತಪ್ಪು ದಾರಿ ಹಿಡಿಯುತ್ತಿದ್ದೀರೆಂಬ ಚಿಕ್ಕ hint ಸಿಕ್ಕರೂ ಸಾಕು ಕೆಂಡವಾಗಿಬಿಡುತ್ತಾನೆ . ಆ ರಾತ್ರಿ ನಿಮಗೆ ಬೆತ್ತದ ರುಚಿ ತೋರಿಸುತ್ತಾನೆ. ಆಗ ಅಮ್ಮ ನಿಮ್ಮನ್ನು ಸಂತೈಸುತ್ತ ಅಪ್ಪನನ್ನು ಬೈದುಕೊಳ್ಳುತ್ತಾಳೆ . ಹೀಗಾಗಿಯೇ ಆಕೆ ಮತ್ತಷ್ಟು ಆಪ್ತವಾಗುತ್ತಾಳೆ . ನೆನಪಿಡಿ, ನಮ್ಮ ಬದುಕು ನೆಲೆಕಾಣಬೇಕಾದರೆ ಅಪ್ಪನ ಬೆತ್ತದ ರುಚಿ ಮತ್ತು ಅಮ್ಮನ ಸಾಂತ್ವನಗಳ Combination ನಿಂದ ಮಾತ್ರ ಸಾಧ್ಯ..
ಮಹತ್ತರವಾದುದೊಂದು ಓದಿಬಿಡುತ್ತೇನೆ , ಏನೋ ಸಾಧಿಸಿಬಿಡುತ್ತೇನೆಂದು ನೀವು ಲಗ್ಗೇಜ್ ರೆಡಿಮಾಡಿಕೊಂಡು ದೂರದ ಪಟ್ಟಣಕ್ಕೆ ಹೊರಟು ನಿಂತಿರುತ್ತೀರಿ.ಆಗ ತನ್ನ ಪಂಚೆಯೊಳಗಿನ ನಿಕ್ಕರ್ ನಿಂದ ಹಣ ತೆಗೆದುಕೊಟ್ಟು , ಬಸ್ ಸ್ಟಾಪ್ ತನಕ ಬಂದು , ಒಂದಷ್ಟು ಮಾತ್ರೆ, ಒಂದು Amrutaanjan ಬಾಟಲ್ , Parle-G ಬಿಸ್ಕೆತ್ ಪ್ಯಾಕ್ ಕೊಟ್ಟು, ತನ್ನ ಅಂಗಿ ಕಿಸೆಯಲ್ಲಿದ್ದ ಕೊನೆಯ 100 ರೂಪಾಯಿಯನ್ನೂ ನಿಮ್ಮ ಕಿಸೆಗೆ ತುರುಕಿ " ಅದು ಪಟ್ಟಣ ಅಲ್ಲಿ ಖರ್ಚು ಭಾಳ ಇರುತ್ತೆ ಇಟ್ಕೊ " ಅಂತ ಹೇಳಿ ತನ್ನ ಕಣ್ಣಂಚಲ್ಲಿ ಸಣ್ಣಗೆ ತೇವಮಾಡಿಕೊಂಡು ಮರೆಯಾಗುತ್ತಾನಲ್ಲ ಅದಕ್ಕೆ ಅಪ್ಪನೇ ಬೇಕು . ತನ್ನ ಕಷ್ಟಗಳನ್ನು ಅಮ್ಮ ಕೂಗಾಡಿಕೊಳ್ಳಬಹುದು ಆದರೆ ಅಪ್ಪ ಎಂದೂ ಅವನ್ನು ಬಿಚ್ಚಿಡಲಾರ. ಮಕ್ಕಳನ್ನು ಪರಿಪೂರ್ಣವಾಗಿಸಲು ತಾನು ಪೂರ್ತಿ ಖಾಲಿಯಾಗಲು ಸಿದ್ದನಾಗುತ್ತಾನಲ್ಲ ಅದಕ್ಕೇ ಈ ಅಪ್ಪನ ಕುರಿತು ಬರೀಬೇಕು ಅನ್ನಿಸಿದ್ದು . ನಮ್ಮ ಎಲ್ಲ ಬೇಕುಗಳನ್ನೂ ಅಪ್ಪನೇ ಪೂರೈಸುತ್ತಾನಾದರೂ ಅವು ಅಮ್ಮನ Recommandation ನಿಂದಲೇ ಆಗುವುದರಿಂದಾಗಿ ಅಮ್ಮ ನಮ್ಮನ್ನು ಸಂವೇದನೆಗೊಳಪಡಿಸಿದಷ್ಟು ಈ ಅಪ್ಪ ಮಾಡಲಾರ . ಪ್ರಾಯಷ: ಇದಕ್ಕೆ ಇರಬೇಕು Mother's Day ಯಂದು ಬರುವ ವಿಶೇಷ ಲೆಖನಗಳು Father's day ಯಂದು ಯಾವ ಪತ್ರಿಕೆಗಳಲ್ಲೂ ಇರೊಲ್ಲ . ಅಮ್ಮನ ಬಗ್ಗೆ ಬರಿ Feminist ಗಳಷ್ಟೇ ಅಲ್ಲ ಪುರುಷರೂ ಜಾಸ್ತಿ ಬರಿತಾರೆ .ಆದ್ರೆ ಅಪ್ಪ ಬರಹಕ್ಕೆ ದಕ್ಕಿರುವುದು ತೀರ ವಿರಳ . ಅಕಸ್ಮಾತ್ ದಕ್ಕಿದರೂ ಅಲ್ಲಿ ಅಪ್ಪನ ಸಿಟ್ಟು, ಸೆಡೆವು, ಒರಟುತನ, ಹಾದರ, ಮೂರ್ಖತನಗಳೆ ಬಿಂಬಿಸಲ್ಪಟ್ಟಿರುತ್ತವೆ. ಅಡುಗೆ ಮನೆಯ ಒಡತಿ ಅಮ್ಮನೇ ಆದರೂ ಅಪ್ಪನಿಗೆ ಅಕ್ಕಿ, ಬೇಳೆ , ಉಪ್ಪು , ಎಣ್ಣೆ , ಯಾವ್ಯಾವ ಡಬ್ಬದಲ್ಲಿವೆ , ಯಾವುದು ಖಾಲಿಯಾಗಿದೆ ಎಂಬುದರ ಸ್ಪಷ್ಟ ಮಾಹಿತಿ ಇರುತ್ತದೆ .
ಕೊನೆಯದಾಗಿ,ಅಪ್ಪನ ಬಗ್ಗೆ ಬರೆಯಲೇಬೇಕೆನಿಸಿದ್ದು ಏಕೆ ಎಂದು ಹೇಳಿ ಮುಗಿಸುತ್ತೇನೆ .ನನ್ನ ಕಂಪನೆಯಲ್ಲಿ " Family day " ಇತ್ತೆಂದು ಅಪ್ಪ ಅಮ್ಮ ಬೆಂಗಳೂರಿಗೆ ಬಂದಿದ್ರು. ಒಂದು ವಾರ ಇಲ್ಲಿದ್ದರು. ಅಮ್ಮನ ಕೈಡುಗೆ ತಿಂದು ಆಫೀಸ್ ಗೆ ಹೊರಟು ನಿಂತಾಗ ಅಪ್ಪ ತನ್ನ ಅದೇ ಹಳೇ ವರಸೆಯಲ್ಲಿ " ದುಡ್ಡು ಐತೇನೋ ? ಕೊಡ್ಲಾ ? " ಅಂತ ಕೇಳ್ತಿದ್ರು . ಹಳ್ಳಿ ಶೈಲಿಗೆ ಹೊಂದಿಕೊಂಡಿರುವ ಅವರಿಗೆ ಈ ಬಿಂದಾಸ್ ಬೆಂಗಳೂರಿನ ಪ್ರತಿಯೊಂದು ವಿಶೇಷವಾಗಿಯೇ ಕಾಣಿಸುತಿತ್ತು . ಬಿ ಎಮ್ ಟಿ ಸಿ ಬಸ್ ನಲ್ಲಿ ಅವರನ್ನು ಒಂದು ವಾರ ಸುತ್ತಾಡಿಸುವದರಲ್ಲಿ ಸಾಕಾಗಿಹೋಯ್ತು . ರೋಡ್ ಕ್ರಾಸ್ ಮಾಡುವಾಗ ಅಪ್ಪ ಅಮ್ಮನ ಕೈಯನ್ನು ಎಷ್ಟು ಬಿಗಿಯಾಗಿ ಹಿಡಿದಿರುತ್ತಿದ್ದರೆಂದರೆ , ಥೇಟ್ ಮದುವೆ ಮಂಟಪದಲ್ಲಿ ಹಿಡಿದಿರುವಂತೆ ಕಾಣುತ್ತಿತ್ತು. ಅದೆಂತಾ ಕಾಳಜಿ, ಭರವಸೆ ಆ ಹಿಡಿತದಲ್ಲಿತ್ತು !!
ಶಿವಮೊಗ್ಗಕ್ಕೆ ಹೊರಟುನಿಂತ ಟ್ರೈನಿ ನಲ್ಲಿ ಅಪ್ಪ-ಅಮ್ಮನನ್ನು ಬೀಳ್ಕೊಡುವಾಗ ಮಾತ್ರ ನನಗೇ ಗೊತ್ತಿಲ್ಲದೆ,ನಾನೂ ಅಪ್ಪನಂತೆ ವರ್ತಿಸಿಬಿಟ್ಟೆ. ಮನೆಯಲ್ಲೇ ಅಪ್ಪನಿಗೆ ದುಡ್ಡು ಕೊಟ್ಟಿದ್ದೆನಾದರೂ ATM ನಲ್ಲಿದ್ದ ಕೊನೆಯ 100 ರೂಪಾಯಿಯನ್ನು ತೆಗೆದುಕೊಂಡು ಬಂದು ಅಪ್ಪನ ಕೈಗಿತ್ತು " salary ಆದ ತಕ್ಷಣ ಮತ್ತೆ ಹಣ ಕಳಿಸ್ತೀನಪ್ಪ " ಎಂದೆ. ಆಗ ಕಾಲೇಜು ದಿನಗಳಲ್ಲಿ ನಾನು ನಮ್ಮೊರಿನ ಬಸ್ ಸ್ಟಾಪ್ ನಲ್ಲಿ ಕಾಯುತ್ತ ನಿಂತಾಗ ಅಪ್ಪ ಕೊಡುತ್ತಿದ್ದ ಕೊನೆಯ 100 ರೂಪಾಯಿ ನೆನಪಾಯಿತು. ನಾವು ಎಷ್ಟೆ ಸಾವಿರ ಅಪ್ಪನಿಗೆ ಕೊಟ್ಟರೂ ಆ 100 ರೂಪಾಯಿಯ ಬೆಲೆಯೇ ಬೇರೆಯಲ್ಲವೆ ?
ಕೊನೆಮಾತು :
June 19 ಭಾನುವಾರ " Father's day " ಯಲ್ಲವೆ ಅದಕ್ಕೆ ಇಷ್ಟೆಲ್ಲ ನೆನಪಾಯಿತು . ನಿಜ ಹೇಳ್ಬೇಕಂದ್ರೆ ಅಮ್ಮನ ಬಗ್ಗೆ ನಾನೂ ಹತ್ತಾರು ಕವನ ಬರೆದಿದ್ದೆ. ಆದರೆ ನನ್ನ ಅಕ್ಷರ ಪ್ರೀತಿ ಅಪ್ಪನೆಡೆಗೆ ಹರಿದದ್ದು ಇದೇ ಮೊದಲು . ಸದ್ಯಕ್ಕೆ ನಾನು ಅಷ್ಟಾದರೂ ಋಣ ಕಡಿಮೆ ಮಾಡಿಕೊಂಡಿದೀನಿ. ಮತ್ತೆ ನೀವು ??
ನಿಮ್ಮವ,
ಶಿವಕುಮಾರ್ ಮಾವಲಿ .
No comments:
Post a Comment