Monday, February 11, 2013

" some -ಬಂಧ ..!  "

ಬುದ್ಧಿ ಬಂದಾಕ್ಷಣ
ನನ್ನ ಮೊದಲ ತೀರ್ಮಾನ ಇದಾಗಿತ್ತು ;
' ನನಗೆ ಯಾವ ಸಂಬಂಧಗಳ ಸರಪಳಿಯೂ
ಬೇಡವೇ ಬೇಡ ... '

ಹಾಗಂದುಕೊಂಡೇ ನನ್ನಷ್ಟಕ್ಕೆ ನಾನಿದ್ದೆ.
ಒಂಟಿತನಕ್ಕೆ ನಂಟರ ಹಂಗೇಕೆ?
ಬದುಕು ಸಾಗಿತ್ತು,ಪ್ರಶ್ನೆಗಳ ಕ್ರೌರ್ಯಕ್ಕೆ
ನಲುಗುತ್ತ ,ನವೆಯ ನುಂಗುತ್ತ ...

ಅಕ್ಕ ಮನೆ ಬಿಟ್ಟವಳೆಂಬ ಕಾರಣ
ತಂಗಿಯ ಮದುವೆಗೆ ಕಾಲ ಹರಣ .
ಅವಳಿಗೊಂದು ಆಸರೆ ಮಾಡಿಟ್ಟು
ನನ್ನ ಪಾಡಿಗೆ ನಾನಿದ್ದುದು ಇತಿಹಾಸ .

ತಂಗಿಯ ಮದುವೆಯಾಯ್ತು
ನಾನು ಅತ್ತಿಗೆಯಾದೆ ,
ಅವಳಿಗೆ ಮಕ್ಕಳಾದವು ,ನಾನು ನಿರ್ಲಿಪ್ತವಾಗಿದ್ದೆ.
ಆದರೆ 'ದೊಡ್ಡಮ್ಮ'ನಾಗಿಯೇ ಬಿಟ್ಟಿದ್ದೆನಲ್ಲ ?

ಆಗಲೂ  ನಾನು ಯಾರ ಸಂಪರ್ಕಕ್ಕೂ
ಬಾರದೆ ಇದ್ದೆನೆಂಬುದು ಸತ್ಯ.
ಅವಳ ಮಗಳು ಬೇಗ ಬೆಳೆದಳಿರಬೇಕು
ಅವಳದ್ದೂ ಮದುವೆ - ಮಕ್ಕಳು ...

ಕೌಮಾರ್ಯವಿಲ್ಲದೆಯೇ ಕುಮಾರಿ,

ಮದುವೆ -ಗಂಡ -ಮಕ್ಕಳಿಲ್ಲದೆಯೇ ಅಜ್ಜಿ ...
ಹೇಗೆ ಕಳಚುವುದು ಈ ಬೇಡದ 'ಬಂಧ'ಗಳನ್ನು ?
ಒಳಗಿದ್ದೇನೋ ,ಹೊರಗಿದ್ದೇನೋ ಎಂಬುದೇ
ಅರ್ಥವಾಗದ ಈ ವಿಷ -ವರ್ತುಲವನ್ನು?!

                                                -ಆರ್ .ಎಮ್ ಶಿವಕುಮಾರ್ ಮಾವಲಿ

                   mavalihere@gmail.com