ಯಾರೋ ಹೇಳಿದ್ದರು ಆ ತಿರುಕಂಗೆ,
"ಬದುಕಲ್ಲಿ ಮುಖ್ಯ ಮಾನ ಮರ್ಯದೆ" ಎಂದು.
ತಿರಿದು ತಿಂದರೂ ಮರ್ಯಾದೆಗೆ
ಬದುಕುತ್ತಿದ್ದೇನೆಂದು ಆತ ಬೀಗುತ್ತಿದ್ದ.
ಬರುಬರುತ್ತ ಮೈಮೇಲ
ಬಟ್ಟೆ ಚಿಂದಿಯಾಯಿತು.
ಮಂದಿ ನೋಡಿ ಅಸಹ್ಯ ಪಟ್ಟರು.
ಮಕ್ಕಳು ಗುಪ್ತಾಂಗಗಳ ನೋಡಿ ನಕ್ಕರು.
ಬೀದಿ ನಾಯಿ ಮೈಮೇಲೆರಗತೊಡಗಿದವು.
ಚಿಂದಿಬಟ್ಟೆಯಿಂದ ಇಣುಕುವ
ಅಂಗಾಂಗಗಳನ್ನು ಮುಚ್ಚಲೆತ್ನಿಸಿದ ಆ ತಿರುಕ.
ಒಮ್ಮೊಮ್ಮೆ ಗೆದ್ದ, ಕೆಲವೊಮ್ಮೆ ಸೋತ.
ಇನ್ನು ವಿಕಸಿಸಲಸಾಧ್ಯವೆಂಬ ಸ್ತಿತಿಗೆ ಬಂತು
ಆ ತಿರುಕನ ಚಿಂದಿ ಬಟ್ಟೆ.
"ಫ್ಹುಟ್ ಪಾತ್ " ನಲ್ಲಿ ಮಲಗಿದ್ದ ಅವನನ್ನು
ರೇಗಿಸಿತೊಂದು ಪಡ್ಡೆ ಹುಡುಗರ ಗುಂಪು.
ತಿರುಕ ಸಹನೆ ಕಳೆದುಕೊಂಡಿದ್ದ
ಮೈಮೇಲಿದ್ದ ತುಂಡುಬಟ್ಟೆಯನ್ನೂ ಕಿತ್ತೆಸೆದ.
ಬಣ್ಣಬಣ್ಣದ ಸಮಾಜಕ್ಕೆ ತನ್ನ ಬೆತ್ತಲೆ ಮೈಯೊಡ್ಡಿ ನಿಂತ.
ಹೀಗೆ ಬಟ್ಟಂಬಯಲಲ್ಲೇ ಬೆತ್ತಲಾದವ
ಮುಗ್ದ ಮಗುವಾದ.
ಬಟ್ಟೆಗೆಂದು ದೇವರಲ್ಲಿ ಮೊರೆದು ಮೊರೆದು ಸೊತಿದ್ದವ
ಕೊನೆಗೊಮ್ಮೆ ಬೆತ್ತಲಾದ.
ಮತ್ತು ಬೆತ್ತಲಾಗಿ ದೇವರೇ ತಾನಾದ.!!!
( ಬತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂಬ ಅಡಿಗರ ಸಾಲಿನಿಂದ ಪ್ರೆರಿತಗೊಂಡು ಬರೆದ ಕವನ )
( NMKRV COLLEGE BANGALORE ಇವರಿಂದ ಬಹುಮಾನ ಪಡೆದ ಕವನ )
@ * ಶಿವೂ *@
No comments:
Post a Comment