Sunday, January 23, 2011

ಹೌದೂ, ಹಾಗಾದರೆ ನಾವೇಕೆ ಆಟೋಗ್ರಾಫ್ ಬರೆಸುತ್ತೇವೆ ....???

        ಹೌದೂ,  ಹಾಗಾದರೆ ನಾವೇಕೆ ಆಟೋಗ್ರಾಫ್ ಬರೆಸುತ್ತೇವೆ ....???

      ಹೊರಗೆ ಉರಿಯುವ ಬಿಸಿಲು .ಮನದೊಳಗೆ ಆತಂಕ.ತೆರೆಯದೇ ಇಟ್ಟ ಪುಸ್ತಕಗಳಿಗಾಗಿ ಹುಡುಕಾಟ. ಇವು ವರ್ಷಾಂತ್ಯದ ಪರೀಕ್ಷೆಗಳು ಹತ್ತಿರ ಬರುತ್ತಿರುವುದರ ಲಕ್ಷಣಗಳು. ವರ್ಷವಿಡೀ ತೋರದ ಕಾಳಜಿ ಮತ್ತು ಜವಬ್ದಾರಿಗಳು ವಿದ್ಯಾರ್ತಿಗಳಿಗೆ  ಈ ಸಮಯದಲ್ಲಿ ಮೈಗೂಡಿಬಿಡುತ್ತದೆ.ಈ ಸಮಯದಲ್ಲಿ ಅವರು ತಮ್ಮ ನೋಟ್ಸ್ ಬುಕ್ ಮತ್ತು study material ಗಳ ಹುಡುಕಾಟಕ್ಕಿಂತ  ವಿಶಿಷ್ಟವಾಗಿ ಗಮನಿಸಬೇಕಾದ್ದು, " ಆಟೋಗ್ರಾಫ್ ಬರೆಸಲು" ಅವರು ಹಂಬಲಿಸುವ ಪರಿ. ಕಾರಿಡಾರ್ ಮೇಲೆ ಓಡಾಡುವವರೆಲ್ಲರ ಕೈಯಲ್ಲೊಂದು ಪುಟ್ಟ ಆಟೋಗ್ರಾಫ್ ಇರುತ್ತದೆ. ತಮಗಿಷ್ಟವಾದ ಗುರುಗಳ,ಗೆಳೆಯರ., ಗೆಳತಿಯರಿಂದ ತಮ್ಮ ಬಗ್ಗೆ ಒಂದಿಷ್ಟು ಬರೆಸಿಕೊಳ್ಳಲು ಎಲ್ಲರೂ ಕಾತರದಿಂದ ಕಾದಿರುತ್ತಾರೆ. ಅರ್ಧ ಟೀ ಕುಡಿಯಲು ಸಹ ಚೌಕಾಸಿ ಮಾಡುವವ 50 ರೂಪಾಯಿ ಕೊಟ್ಟು ಹಸ್ತಾಕ್ಷರದ ಪುಟ್ಟ ಪುಸ್ತಕವನ್ನು ಕೊಂಡಿರುತ್ತಾನೆ. ಕಾಲೇಜ್ ದಿನಗಳಲ್ಲಿ ಒಮ್ಮೆಯೂ ಮಾತನಾಡದವರೂ ಕೂಡ ಈ ಆಟೋಗ್ರಾಫ್ ನಲ್ಲಿ "ಆತ್ಮೀಯ ಗೆಳೆಯ(ತಿ) ರಾಗಿರುತ್ತಾರೆ. ಅಲ್ಲಿ ನಮಗೊಂದಿಷ್ಟು ಪುಕ್ಕಟೆ ಸಲಹೆಗಳು,ನಮ್ಮ ಬಗ್ಗೆ ಮುಜುಗರ ತರಿಸುವಂತ ಕಾಂಪ್ಲಿಮೆಂಟ್ ಗಳು, ಜೀವನದ ಬಗ್ಗೆ ದೊಡ್ಡ ದೊಡ್ಡ ವ್ಯಾಖ್ಹ್ಯಾನಗಳು, ಫಿಲಾಸಫಿ ಗಳು, ನಮ್ಮ ಮಿತ್ರರ ಅತೀ personal ಅಭಿರುಚಿಗಳು ಮತ್ತು ಎಂದೋ ಕೊಟ್ಟ ನೋವಿಗೆ ಕೇಳುವ Sorry ಗಳು ಸಿಗುತ್ತವೆ. ನಮ್ಮ ಗುರುಗಳಾದವರು ನಮಗೊಂದಿಷ್ಟು ನುಡಿಮುತ್ತುಗಳನ್ನು ಬರೆದರೆ, ನಮ್ಮ ಆಪ್ತ ಸ್ನೇಹಿತರು ನಮ್ಮ  ವ್ಯಕ್ತಿತ್ವವನ್ನು ಸೆರೆಹಿಡಿಯುವಂತ ಬರಹಗಳನ್ನು ಬಿಂಬಿಸುತ್ತಾರೆ. ದಿಸೆಂಬರ್ ,ಜನವರಿ ನಂತರ ಡಿಗ್ರಿ ವಿದ್ಯಾಥಿಗಳು  ಕ್ಲಾಸ್ ರೂಮ್ ನತ್ತ ಸುಳಿಯುವುದಿಲ್ಲವಾದರೂ , ಕೈಲ್ಲೊಂದು ಚಿಕ್ಕ ಆಟೋಗ್ರಾಫ್ ಹಿಡಿದು ಕ್ಯಾಂಪಸ್ ನಲ್ಲಿ ಅಲೆದಾಡುವುದು ಸಾಮಾನ್ಯವಾಗಿರುತ್ತದೆ.  ಕೆಲವೊಮ್ಮೆ " Regularly irregular" ಸ್ಟೂಡೆಂಟ್ ಗಳೂ ಸಹ ಈ ಆಟೋಗ್ರಾಫ್ ಬರೆಯಲು ಕೊಟ್ಟಾಗ ,'ಇವನು ನಮ್ಮ ಕ್ಲಾಸ್ ಮೇಟ್ ಆಗಿದ್ನಾ? ' ಎಂಬ ಗೊಂದಲವೂ ಉಂಟಾಗುತ್ತದೆ.
      ಹೌದೂ ಹಾಗಾದರೆ ನಾವೇಕೆ ಆಟೋಗ್ರಾಫ್ ಬರೆಸುತ್ತೇವೆ ....??  ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮನ್ನು      ಬೇರೆಯವರಿಂದ ಹೊಗಳಿಸಿಕೊಳ್ಳಲು.ನಿಜವಾಗಿಯೂ ಆಟೋಗ್ರಾಫ್ ಗಳು ನಮ್ಮ personality ಯನ್ನ ಯತಾವತ್ತಾಗಿ  ಸೆರೆಹಿಡಿಯಲಾರವು.  ಅದೇಕೊ ಅವು ಬರಿ ಪ್ರಶಂಸೆಗೇ ಜೋತುಬಿದ್ದಿರುತ್ತವೆ. ಅಗಲಿಕೆಯ ಹೊಸ್ತಿಲಲ್ಲಿ ಎಣ್ಣೆ ಸೀಗೆಕಾಯಂತೆ ಇದ್ದವರಲ್ಲೂ ಕೂಡ ಮೈತ್ರಿ ಭಾವನೆ ಮೂಡಿಬಿಡುತ್ತದೆ. ' ನನ್ನ ಮೈಯ ರಕ್ತ ಕೆಂಪಾಗಿರುವ ವರೆಗೊ ನಿನ್ನ ಮರೆಯಲಾರೆ ಮಿತ್ರ' ಎಂದು ಗೆಳೆಯನೊಬ್ಬ ಬರೆದುಬಿಟ್ಟಿದ್ದನೆಂದರೆ,ಎಂತಾ ಖುಷಿಯಾಗಬಹುದು??,ನಮ್ಮ ಬಗ್ಗೆ ಇತರರು ಬರೆದ ಪ್ರಶಂಸನೀಯ ಪದಪುಂಜಗಳು ನಮಗೇ ಮುಜುಗರವುಂಟು ಮಾಡುವಂತಿದ್ದರೂ ಮೂಕರಾಗಿ ಅವನ್ನೆಲ್ಲ ಒಪ್ಪಿಕೊಂಡುಬಿಡುತ್ತೇವೆ.ಅಲ್ಲಿ ಕೆಲವರಂತೂ ನಮ್ಮ ನಿರೆಕ್ಷೆಗೂ ಮೀರಿ ನಮ್ಮನ್ನು ಹಚ್ಛಿಕೊಂಡಿರುತ್ತಾರೆ.ಅವರ ಭಾವನೆಗಳ 'overflow'  ಹಾಳೆಗಳ ಮೇಲಾಗುತ್ತದೆ. " ಊರು ದೂರವಿದ್ದರೊ ಮನಸ್ಸು ಹತ್ತಿರವಿರಲಿ " ಎಂದು ಗೆಳೆಯ(ತಿ) ಬರೆದರೆ ಅದೆಂತ ಮಧುರ ಯಾತನೆಯಲ್ಲವಾ! ಮತ್ತೊಬ್ಬಳು ಗೆಳತಿ ಬರೆದಿರುತ್ತಾಳೆ, ' ಒಮ್ಮೆ ಕಟ್ಟಿದ ಸರಪಣಿಯನ್ನು ಎಂದೂ ಕತ್ತರಿಸದಿರು ಗೆಳೆಯ' ಎಂದು. ಆಟೋ ಗ್ರಾಫ್ ಗಳಲ್ಲಿ ಅದುವರೆಗೂ ಬಾಯಿಬಿಟ್ಟು ಹೇಳಲಾಗದ ಪ್ರೀತಿಯನ್ನು ಒಂದೆ ಸಾಲಿನಲ್ಲಿ ಬರೆದುಬಿಡಬಹುದು. ' ದೂರದೂರಿನಲ್ಲಿರುವ ಮಗುವನ್ನು ತಾಯಿ ಪ್ರೀತಿಸಿದಂತೆ ನಿನ್ನ ನನ್ನ ಸ್ನೆಹ ಕಣೋ,ಪ್ಲೀಸ್ ಮರೆಯದಿರು ಈ ಕನಸಿನ ಬಡವಿಯನ್ನು' ಎಂಬ ಸಾಲಿನಲ್ಲಿ ಗೌಪ್ಯವಾಗಿಟ್ಟ  ಪ್ರೀತಿಯಿಲ್ಲವೆ??. ಹಾಗೆ ತೀರ ಹತ್ತಿರದ ಮಿತ್ರನೊಬ್ಬ ಬರೆಯುತ್ತಾನೆ -" ಲೇ ನಾನೂ ಬರೀಬೇಕೆನೊ, ಹೇಳುವುದು , ಬರೆಯುವುದು, ಕೇಳುವುದನ್ನು ಮೀರಿದ್ದೂ ಒಂದು ಇದೆಯಲ್ಲ. ಅದು ನಮ್ಮಿಬ್ಬರಿಗೂ ಗೊತ್ತು. ಅದನ್ನು ಕೊನೆವರೆಗೂ ಜತನದಿಂದ ಕಾಪಾಡೋಣ". ಹೀಗೆ ಆಟೋಗ್ರಾಫ್ ತೀರಾ ಸಾಮಾನ್ಯರನ್ನೊ ಕವಿಯಾಗಿಸುತ್ತದೆ,ತತ್ವಜ್ನಾನಿಯಾಗಿಸುತ್ತದೆ. ಅಂದಹಾಗೆ SLAM BOOK ಗಳಲ್ಲಿ ಬರೆಸುವ ಆಟೋಗ್ರಾಫ್ ಗಳಲ್ಲಿ ಈ ಥ್ರಿಲ್ ಇರುವುದಿಲ್ಲ. ಅವು ಒಂತರ bio data information ಗಳಿದ್ದಂತೆ. ಡೈರಿ ಅಥವ ಅದೆಕ್ಕೆಂದೆ ಮೀಸಲಿಟ್ಟ ಬುಕ್ ಗಳಲ್ಲಿ ಮಾತ್ರ ಈ ಹಿತಾನುಭವ ಸಿಗುತ್ತದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ, ಆಟೋಗ್ರಾಫ್ ಗಳು ಸಿಪ್ಪೆ ಸುಲಿದಿಟ್ಟ ಬಾಳೆಹಣ್ಣಿನಂತೆ . ನೋಡುತ್ತ ಕೂತರೆ ರುಚಿ ಸವಿಯಲಾಗದು. ಅವನ್ನು ಓದಿಯೇ ಅನಿಭವಿಸಬೇಕು. ಮುಂದೆಂದೋ ನೀವು ದೊಡ್ಡದೊಂದು ಹುದ್ದೆಯಲ್ಲಿದ್ದಾಗಲೋ, ಬದುಕಿನ ವಿಚಿತ್ರ ತಿರುವುಗಳಲ್ಲಿ ಸಿಕ್ಕು ಸೀರುಂಡೆಯಾದಾಗಲೋ,ನಿಮ್ಮ ಮಗನನ್ನು ಕಾಲೆಜ್ ಗೆ ಸೇರಿಸಲು ಹೋದಾಗ ನಿಮ್ಮ ಕಾಲೇಜ್ ದಿನಗಳು ನೆನಪಾದಾಗಲೋ, ನೀವು ಅಂದುಕೊಂಡಷ್ಟು ಪ್ರೀತಿಸುವ ಸಂಗಾತಿ ಸಿಗದಿದ್ದಾಗಲೋ,ಇನ್ನೇನು ಮುಪ್ಪು ಬಂದೇಬಿಟ್ಟಿತು ಎನ್ನುವ ಕಾಲದಲ್ಲೋ ಅಥವ ಪ್ರೀತಿಸಿ ಕೈಕೊಟ್ಟವ(ನ)ಳ ಹೆಸರನ್ನು ನಿಮ್ಮ ಕಂದಮ್ಮನಿಗೆ ಇಡುವ ಸಮಯ ಬಂದಾಗಲೋ, ನೀವು ಈ ವರೆಗೆ ಬರೆಸಿಟ್ಟ ಆಟೋಗ್ರಾಫ್ ಪುಟಗಳನ್ನು ರಾತ್ರಿ ಮಲಗುವ ಮುನ್ನ ಕದ್ದು ತಗೆಯಿರಿ. ( ಆಗ ಕದ್ದೇ ಓದಬೇಕಾದ ಸ್ತಿತಿ ನಿಮ್ಮದು) ಏಕಾಂತದಲ್ಲಿ ,ಆ ರಾತ್ರಿಯ ನೀರವತೆಯಲ್ಲಿ ಓದಿ. ಒಂದೇ ಉಸಿರಿಗೆ ಎಲ್ಲ ಪುಟಗಳನ್ನೂ ಒದಿ ಮುಗಿಸಿಬಿಡುತ್ತೀರಿ.... ಆಗ ನೀವು " Bliss of Solitude " ಅಂತ ವರ್ಡ್ಸ್ವರ್ತ್ ಕವಿ ಹೇಳುವ ಪರಮಾನಂದದ ಸ್ತಿತಿಯಲ್ಲಿರುತೀರಿ. Can you try that ??


                                                                                      @ ಶಿವಕುಮಾರ್ ಮಾವಲಿ@

Wednesday, January 19, 2011

ಅಮ್ಮ ನೀ ನೆನಪಾಗುತ್ತೀ .....

                     ಅಮ್ಮ  ನೀ ನೆನಪಾಗುತ್ತೀ .....

                     ಅಮ್ಮ  ನೀ ನೆನಪಾಗುತ್ತೀ .....
                     ಮಹಿಳಾ ಮೀಸಲಾತಿ ವಿರುದ್ಧ ನಾ 
                     ಭಾಷಣ ಬಿಗಿಯುವಾಗಲೆಲ್ಲ ;
                    ಸ್ತ್ರೀ-ಶೋಷಣೆಗೆ ಗಂಡಸು ಮಾತ್ರ 
                    ಕಾರಣವಲ್ಲ  ಎಂದು ನಾ ಅಬ್ಬರಿಸುವಾಗಲೆಲ್ಲ ;

                    ಅಮ್ಮ  ನೀ ನೆನಪಾಗುತ್ತೀ .....      
                    ಆತ್ಮೀಯ ಗೆಳತಿ ತೋರಿಸುತ್ತಿದ್ದ 
                    ಪ್ರೀತಿ ಇನ್ನಿಲ್ಲದಾದಾಗ ;
                   ಬಸ್ ನಲ್ಲೊಬ್ಬಳು ಚಿಲ್ಲರೆ ತೆಗೆಯಲು 
                   ಬಾಗಿದ್ದಕ್ಕೆ ಸೆರಗು ಜಾರಿದಾಗ ;

                  ಅಮ್ಮ  ನೀ ನೆನಪಾಗುತ್ತೀ .....                    
                  ಬಿಕನಿಯಲ್ಲೇ ಬೀದಿಗೆ ಬಂದು
                  ನರ್ತಿಸುವವರ  ಕಂಡಾಗ ;
                 ಮಜೆಸ್ಟಿಕ್ ಬಳಿಯ ಹೆಣ್ಣೊಂದು 
                 ಹಣೆಯಿಂದಲೇ ಸಿಗ್ನಲ್ ಕೊಟ್ಟು ಕರೆದಾಗ ;

                 ಹೀಗೆ 'ಸ್ತ್ರೀ ' ಎಂಬ ರೂಪಕ   
                ಕೇಳಿದಾಗ ಮತ್ತೆ ನೋಡಿದಾಗ      
                ನೀನೆ ಕಣ್ಮುಂದೆ ನಿಲ್ಲುತ್ತೀಯಮ್ಮ .

                ಅಂದ ಹಾಗೆ, ಮೊನ್ನೆ ನಾನು ರಜೆಯಲ್ಲಿ 
                ಊರಿಗೆ ಬಂದಾಗ ನೀ ಹುಡುಕುತ್ತಿದ್ದ ,
                ನಮ್ಮನೆಯ 'ಕ್ಷೀರಮೂಲ ' ಗೌರಿ ಸಿಕ್ಕಳೆ ? 
               ಯಾರ ತೋಟಕ್ಕೆ, ಕದ್ದು ಮೇಯಲು ಹೋಗಿದ್ದಳವಳು ?
               ಅಪ್ಪನಿಂದ ನಿನಗೆ ಬೈಸಲಿಕ್ಕೆ !
  
               ಗೌರಿ ಯಂತ ಹಸು ಕಳೆದು ಹೋದ  ದಿನ
              ನೀ ಊಟ-ತಿಂಡಿ ,ನೀರು ಕೂಡ ಮುಟ್ಟಿರಲಿಲ್ಲವಲ್ಲ,
              ಹಾಗಾಗಿಯೇ  ನಿನ್ನ ನೆನಪು 
              ನನಗೆ ಮತ್ತೆ ಮತ್ತೆ ಕಾಡುತ್ತದೆ ಅಮ್ಮ .

                        @ ಶಿವಕುಮಾರ್ ಮಾವಲಿ@